ಏಳು ನ್ಯಾಯಾಧೀಶರ ಒತ್ತೆಸೆರೆ : ಎನ್‌ಐಎ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ನಡೆಸುತ್ತಿದ್ದ ನ್ಯಾಯಾಧೀಶರಿಗೆ 10 ತಾಸು ದಿಗ್ಭಂಧನ

ನವದೆಹಲಿ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಏ.1ರಂದು ನಡೆದಿದ್ದ ಏಳು ನ್ಯಾಯಾಧೀಶರ ಘೇರಾವ್ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಭಾರತದ ಚುನಾವಣಾ ಆಯೋಗ ಎನ್‌ಐಎಗೆ ವಹಿಸಿದೆ.

ಪಶ್ಚಿಮ ಬಂಗಾಳ ಅತ್ಯಂತ ಧ್ರುವೀಕರಣಗೊಂಡಿರುವ ರಾಜ್ಯವಾಗಿದೆ. ನ್ಯಾಯಾಂಗದ ಅಧಿಕಾರಿಗಳನ್ನು ಒತ್ತೆ ಇರಿಸಿಕೊಂಡಿದ್ದು ನ್ಯಾಯಾಂಗದ ಮೇಲೆ ನಡೆದ ವ್ಯವಸ್ಥಿತ ದಾಳಿ. ರಾಜ್ಯದಲ್ಲಿ ಅರಾಜಕತೆಯನ್ನು ಸಹಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ಅಸಮಾಧಾನ ಹೊರಹಾಕಿ ಪ್ರಕರಣದ ಬಗ್ಗೆ CBI ಅಥವಾ NIA ತನಿಖೆಗೆ ವಹಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.























































 
 

ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಚುನಾವಣಾ ಆಯೋಗ ಪತ್ರ ಬರೆದಿದೆ. ಪತ್ರದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿದೆ. ಈ ಬಗ್ಗೆ ಚುನಾವಣಾ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿ, ಶುಕ್ರವಾರ (ಏ.2) ಪಶ್ಚಿಮ ಬಂಗಾಳಕ್ಕೆ ಎನ್‌ಐಎ ತಂಡ ತಲುಪಲಿದೆ ಎಂದು ಹೇಳಿದ್ದಾರೆ.

ಮಾಲ್ಡಾ ಜಿಲ್ಲೆಯಲ್ಲಿ ಏಪ್ರಿಲ್‌ 1ರಂದು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿದ್ದ ನ್ಯಾಯಾಂಗ ಅಧಿಕಾರಿಗಳ ಮೇಲೆ ದೊಡ್ಡಮಟ್ಟದ ದಾಳಿ ನಡೆದಿತ್ತು. ಮತದಾರರ ಪಟ್ಟಿಯಿಂದ ಕೆಲವು ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಕಾರಣಕ್ಕೆ ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಮಾಲ್ಡಾದ ಇಂಗ್ಲಿಷ್ ಬಜಾರ್‌ನಲ್ಲಿರುವ ಕಚೇರಿಯನ್ನು ಮುತ್ತಿಗೆ ಹಾಕಿದ್ದರು.

ಮೂವರು ಮಹಿಳಾ ಜಡ್ಜ್‌ ಸೇರಿ ಒಟ್ಟು ಏಳು ನ್ಯಾಯಾಧೀಶರನ್ನು ಪ್ರತಿಭಟನಾಕಾರರು ಸುಮಾರು 10 ಗಂಟೆಗಳ ಕಾಲ ಕಚೇರಿಯೊಳಗೆ ಕೂಡಿಹಾಕಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಈ ಸಮಯದಲ್ಲಿ ಅಧಿಕಾರಿಗಳಿಗೆ ಆಹಾರ, ನೀರು ಅಥವಾ ವೈದ್ಯಕೀಯ ನೆರವು ಸಿಗದಂತೆ ತಡೆಯಲಾಗಿತ್ತು. ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿತ್ತು.

ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಲ್ಲದೆ, ಕಚೇರಿಯ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದರು. ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲರಾಗಿದ್ದರು. ಅಧಿಕಾರಿಗಳನ್ನು ಹೊರಬರಲು ಬಿಡದೆ ಅವರಿಗೆ ಜೀವ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಕೋಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದು ಮಧ್ಯ ಪ್ರವೇಶಿಸುವಂತೆ ವಿನಂತಿಸಿದ್ದರು. ಪತ್ರ ಬರೆದ ಕೂಡಲೇ ಮಧ್ಯರಾತ್ರಿ ಸುಪ್ರೀಂ ಕೋರ್ಟ್‌ ಕೇಂದ್ರ ಸಶಸ್ತ್ರ ಪಡೆಗಳನ್ನು ಸ್ಥಳಕ್ಕೆ ಕಳುಹಿಸುವಂತೆ ಆದೇಶ ನೀಡಿತ್ತು.

ಸುಪ್ರೀಂ ಆದೇಶದ ಬಳಿಕ ಕೇಂದ್ರ ಗೃಹ ಸಚಿವಾಲಯ ಮಾಲ್ಡಾ ಜಿಲ್ಲೆಯ ಇಂಗ್ಲಿಷ್ ಬಜಾರ್‌ಗೆ ಅರೆಸೇನಾ ಪಡೆಗಳನ್ನು ರವಾನಿಸಿತ್ತು. ಈ ಪಡೆಯ ಸೈನಿಕರು ಸ್ಥಳಕ್ಕೆ ತಲುಪಿ ಪ್ರತಿಭಟನಾಕಾರರನ್ನು ಚದುರಿಸಿ, ಕಚೇರಿಯೊಳಗೆ ಸಿಲುಕಿದ್ದ ಅಧಿಕಾರಿಗಳನ್ನು ಸುರಕ್ಷಿತವಾಗಿ ಹೊರತಂದಿದ್ದರು.

ಮತದಾರರ ಪಟ್ಟಿಯ ದೋಷಗಳು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸುಮಾರು 150 ನ್ಯಾಯಾಂಗ ಅಧಿಕಾರಿಗಳನ್ನು (ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರು) ನಿಯೋಜಿಸಲು ಸೂಚಿಸಿತ್ತು. ಪಾರದರ್ಶಕತೆ ಕಾಯ್ದುಕೊಳ್ಳಲು ಜಾರ್ಖಂಡ್ ಮತ್ತು ಒಡಿಶಾದಿಂದ ಸುಮಾರು 200 ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.

error: Content is protected !!
Scroll to Top