ಮೈಸೂರಿನಲ್ಲಿ ಅಡಗಿ ಕುಳಿತು ಪೊಲೀಸರನ್ನು ಆಟವಾಡಿಸುತ್ತಿದ್ದ ಆರೋಪಿ
ಮೈಸೂರು : ಸರ್ಕಾರಿ ಕಚೇರಿಗಳು, ಶಾಲೆಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸುತ್ತಿದ್ದ ಆರೋಪಿಯನ್ನು ದೆಹಲಿ ಪೊಲೀಸರ ವಿಶೇಷ ತಂಡ ಮೈಸೂರಿನಲ್ಲಿ ಬಂಧಿಸಿದೆ. ಮೈಸೂರು ನಗರದಲ್ಲಿ ಅಡಗಿ ಕುಳಿತಿದ್ದ ಶ್ರೀನಿವಾಸ್ ಎಂಬಾತನನ್ನು ಬಂಧಿಸಲಾಗಿದ್ದು, ದೆಹಲಿ ಪೊಲೀಸರ ತಂಡ ಆತನನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ದಿದೆ. ಆರೋಪಿಯು ಒಂದೇ ತಿಂಗಳಲ್ಲಿ ಅನೇಕ ಬಾರಿ ಬಾಂಬ್ ಬೆದರಿಕೆ ಸಂದೇಶ ರವಾನೆ ಮಾಡಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ.
ಮೈಸೂರಿನ ಪ್ರತಿಷ್ಠಿತ ಬೃಂದಾವನ ಬಡಾವಣೆ ಎರಡನೇ ಹಂತದ 6ನೇ ಕ್ರಾಸ್ನಲ್ಲಿರುವ ಮನೆಯಲ್ಲಿ ಆರೋಪಿ ಅಡಗಿ ಕುಳಿತಿದ್ದ. ಈ ಕುರಿತು ಮಾಹಿತಿ ಪಡೆದ ದೆಹಲಿ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಸ್ಥಳೀಯ ವಿವಿ ಪುರಂ ಪೊಲೀಸ್ ಠಾಣೆಯ ಸಹಕಾರದಿಂದ ದಿಢೀರ್ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧನದ ವೇಳೆ ಆರೋಪಿಯ ಮನೆಯಲ್ಲಿ ಹಲವು ಸಿಮ್ಕಾರ್ಡ್ಗಳು ಹಾಗೂ ಲ್ಯಾಪ್ಟಾಪ್ ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಪರಿಶೀಲನೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ದೆಹಲಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಿದ್ದರು.
ಪ್ರಸ್ತುತ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದೊಯ್ದಿದ್ದು, ಈ ಹಿಂದೆ ಕಳುಹಿಸಿದ ಎಲ್ಲ ಬೆದರಿಕೆ ಸಂದೇಶಗಳ ಹಿನ್ನೆಲೆ ಹಾಗೂ ಉದ್ದೇಶಗಳ ಬಗ್ಗೆ ವಿಚಾರಣೆ ನಡೆಯಲಿದೆ.
ಈ ಹಿಂದೆ ಮೈಸೂರಿನಲ್ಲಿ ದೊಡ್ಡ ಡ್ರಗ್ಸ್ ತಯಾರಿಕಾ ಮತ್ತು ಪೂರೈಕೆ ಜಾಲವನ್ನು ಮಹಾರಾಷ್ಟ್ರ ಪೊಲೀಸರು ಬಯಲಿಗೆಳೆದಿದ್ದರು. ಅದಾದ ನಂತರವೂ ಮೈಸೂರಿನಲ್ಲಿ ಅನೇಕ ಡ್ರಗ್ಸ್ ಪ್ರಕರಣಗಳು ಬಯಲಿಗೆ ಬಂದಿವೆ. ಇದೀಗ ಬಾಂಬ್ ಬೆದರಿಕೆ ಸಂದೇಶಗಳ ಆರೋಪಿ ಸಹ ಮೈಸೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ಅಡಗಿ ಇದ್ದುದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.

























