ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ದಿಢೀರ್ ಎಂದು ಹಿಂದಿ ಕೈಬಿಟ್ಟ ಸರ್ಕಾರ
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ಹಿಂದಿಯ ಅಂಕವನ್ನು ದಿಢೀರ್ ಎಂದು ಕೈಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮ ಮತ್ತೊಮ್ಮೆ ಭಾಷಾ ವಿವಾದ ಭುಗಿಲೇಳುವಂತೆ ಮಾಡಿದೆ. ಶಿಕ್ಷಣ ತಜ್ಞರು, ರಾಜಕೀಯ ಮುಖಂಡರು, ಭಾಷಾ ಹೋರಾಟಗಾರರು ಈ ಕುರಿತು ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಪರೀಕ್ಷೆ ನಡೆಯುತ್ತಿರುವಾಗಲೇ ಯಾವುದೇ ಮುನ್ಸೂಚನೆ ನೀಡದೆ ದಿಢೀರ್ ಎಂದು ಸರ್ಕಾರ ಹಿಂದಿಯನ್ನು ಕೈಬಿಡುವ ನಿರ್ಧಾರ ಕೈಗೊಂಡಿರುವುದು ವಿದ್ಯಾರ್ಥಿಗಳ ಹಿತಕ್ಕಿಂತ ರಾಜಕೀಯ ಕಾರಣವೇ ಗುರಿಯಾಗಿರುವಂತೆ ಕಾಣಿಸುತ್ತಿದೆ.
ಹಿಂದಿ ಅಂಕಗಳನ್ನು ಕೈಬಿಟ್ಟಿರುವುದು ಕೇವಲ ರಾಜಕೀಯ ವಿರೋಧ, ಕೇಂದ್ರ ಸರ್ಕಾರದ ಮೇಲಿನ ದ್ವೇಷಕ್ಕಾಗಿ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವ ರಾಜ್ಯ ಸರ್ಕಾರದ ತೀರ್ಮಾನ ವಿವೇಕ ರಹಿತ ಹಾಗೂ ಆಘಾತಕಾರಿ ಎಂದು ಬಿಜೆಪಿ ಕಿಡಿಕಾರಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಂಕಗಳನ್ನು 625ಕ್ಕೆ ಬದಲಿಗೆ 525 ಅಂಕಗಳಿಗೆ ಇಳಿಕೆ ಮಾಡಲಾಗಿದೆ. ಹಿಂದಿ ಸೇರಿ ತೃತೀಯ ಭಾಷೆಗಳ ಅಂಕಗಳಿಗೆ ಕೊಕ್ ನೀಡಲಾಗಿದ್ದು ಹಿಂದಿನ ವರ್ಷಗಳಂತೆ ಅವರು 100 ಅಂಕಗಳಿಗೆ ಪರೀಕ್ಷೆ ಬರೆಯಲಿದ್ದಾರೆ. ಅಂಕಪಟ್ಟಿಯಲ್ಲಿ ಗ್ರೇಡ್ ಅಂತ ನಮೂದಿಸಲಾಗುತ್ತದೆ ಎಂದು ಹೇಳಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಏಕಾಏಕಿ ಹಿಂದಿ ಭಾಷೆ ಕೈ ಬಿಡುವ ನಿಲುವು ತೆಗೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಅದರಲ್ಲೂ SSLC ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರದ ಹಠಾತ್ ನಿಲುವು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಕಳೆದ ಹಲವು ದಶಕಗಳಿಂದ ದೇಶದಲ್ಲೇ ಮಾದರಿ ಶಿಕ್ಷಣದಲ್ಲಿ ತ್ರಿಭಾಷಾ ನೀತಿ ಹೊಂದಿರುವ ಕರ್ನಾಟಕದಲ್ಲಿ ಯಾವುದೇ ಪೂರ್ವಾಪರ ಚರ್ಚೆ, ಶಿಕ್ಷಣ ತಜ್ಞರ ಸಲಹೆ, ಪ್ರತಿಪಕ್ಷಗಳ ನಿಲುವು ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ಹಿಂದಿ ಭಾಷೆ ಕೈ ಬಿಡುವ ನಿಲುವು ತೆಗೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಅದರಲ್ಲೂ SSLC ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರದ ಹಠಾತ್ ನಿಲುವು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ನಾವು ಕನ್ನಡ ಭಾಷೆಯಲ್ಲಿ ಕಲಿಕೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಕನ್ನಡ ನಮ್ಮ ಮಾತೃಭಾಷೆ. ಕನ್ನಡವು ನಮ್ಮ ಬೋಧನಾ ಭಾಷೆಯಾಗಿ ಜಾಗತಿಕ ದೃಷ್ಟಿಕೋನದಿಂದ ಇಂಗ್ಲಿಷ್ ಕಲಿಕೆಗೂ ನಮ್ಮ ಅಭ್ಯಂತರವಿಲ್ಲ. ಹಾಗೆಯೇ ಕನ್ನಡಿಗರು ದೇಶದ ಅನೇಕ ರಾಜ್ಯಗಳಿಗೆ ಉದ್ಯೋಗ ಅರಸಿ ಹೋದಾಗ ಕನಿಷ್ಠಮಟ್ಟದ ಹಿಂದಿ ಭಾಷೆಯ ಅರಿವು ಇರಬೇಕಾಗುತ್ತದೆ. ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಕರ್ನಾಟಕದ ಯುವ ಸಮೂಹವು ರಾಷ್ಟ್ರಮಟ್ಟದಲ್ಲಿ ಹಿಂದೆ ಬೀಳಬಾರದು ಎಂಬ ಕಾಳಜಿ ನಮ್ಮದು.
ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಅನುಸರಿಸಲಾಗುತ್ತಿರುವ ತ್ರಿಭಾಷಾ ಸೂತ್ರ ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್‌ನ್ನು ಸಂವಹನ ಭಾಷೆಯಾಗಿ ಹಾಗೂ ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಆದಾಗ್ಯೂ ಹಿಂದಿ ಭಾಷೆಯನ್ನು ಕೈಬಿಡುವುದಾದರೆ ಇದರ ಬಗೆಗೆ ಭಾಷಾ ತಜ್ಞರು, ಶಿಕ್ಷಣ ತಜ್ಞರು, ಎಲ್ಲ ಭಾಷೆಯ ಸಾಹಿತಿಗಳು ಸೇರಿದಂತೆ ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದೆ ಎಂದಿದ್ದಾರೆ.
ಹಿಂದಿ ರಾಜ್ಯಗಳಲ್ಲಿ ನಿಮ್ಮದೇ ಸರ್ಕಾರವಿದೆ, ಅಲ್ಲಿ 3ನೇ ಭಾಷೆಯನ್ನಾಗಿ ಕನ್ನಡವನ್ನು ಕಡ್ಡಾಯಗೊಳಿಸಿ ಎಂದು ಇದೇ ವೇಳೆ ಬಿಜೆಪಿಗೆ ಕರವೇ ಸವಾಲು ಹಾಕಿದೆ. ಉತ್ತರ ಪ್ರದೇಶ, ಬಿಹಾರ ಇನ್ನಿತ್ಯಾದಿ ಹಿಂದಿ ರಾಜ್ಯಗಳಲ್ಲಿ ನಿಮ್ಮದೇ ಪಕ್ಷದ ಸರ್ಕಾರಗಳಿವೆ. ಅಲ್ಲಿ ಕೇವಲ ಎರಡು ಭಾಷೆಗಳನ್ನು ಕಲಿಸಲಾಗುತ್ತಿದೆ. ನೀವು ಅಲ್ಲಿ ಮೂರನೇ ಭಾಷೆಯನ್ನಾಗಿ ಕನ್ನಡವನ್ನು ಕಡ್ಡಾಯಗೊಳಿಸಿ ಎಂದು ಬಿಜೆಪಿಗೆ ಕರ್ನಾಟಕ ರಕ್ಷಣಾ ವೇದಿಕೆ ಸವಾಲು ಹಾಕಿದೆ.
SSLC ವಿದ್ಯಾರ್ಥಿಗಳಿಗೆ ಇದ್ದ ಹೊರೆಯನ್ನು ತೆಗೆದು, ಮೂರನೇ ಭಾಷೆಗೆ ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ನಿಮ್ಮ ಹೇಳಿಕೆ ಗಮನಿಸಿದೆ. ನಿಮ್ಮ ಒಟ್ಟು ಹೇಳಿಕೆಯು ಆತ್ಮಘಾತಕತನದಿಂದ ಕೂಡಿದೆ, ಕನ್ನಡದ ಮಕ್ಕಳ ಭವಿಷ್ಯದ ವಿರುದ್ಧವಾಗಿದೆ, ಕನ್ನಡಿಗರ ಆಶೋತ್ತರಗಳನ್ನು ಹೀಯಾಳಿಸುವಂತೆ ಇದೆ. ಇಂಥ ಹೇಳಿಕೆಯನ್ನು ನಿಮ್ಮಿಂದ ನಾನು ನಿರೀಕ್ಷಿಸಿರಲಿಲ್ಲ ಎಂದು ಕಿಡಿಕಾರಿದೆ.
2023-2024ರ SSLC ಪರೀಕ್ಷೆಯಲ್ಲಿ 90,000ಕ್ಕೂ ಹೆಚ್ಚು ಕನ್ನಡದ ಮಕ್ಕಳು ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದರು. 2024-25ರಲ್ಲಿ ಹಿಂದಿಯೊಂದರಲ್ಲಿ 1,42,400 ಮಕ್ಕಳು ಫೇಲ್ ಆಗಿದ್ದರು. ಪ್ರತಿವರ್ಷ ನಮ್ಮ ಕನ್ನಡದ ಮಕ್ಕಳು ತಮ್ಮದಲ್ಲದ ಹಿಂದಿಯ ಕಡ್ಡಾಯ ಕಲಿಕೆಯಿಂದ ಒಂದು ವರ್ಷ ಕಳೆದುಕೊಳ್ಳುತ್ತಿದ್ದರು. ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ? ನಮ್ಮ ಕನ್ನಡದ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡಲು ನಮಗೇನು ಹಕ್ಕಿದೆ? ಯಾಕೆ ಅವರ ಮೇಲೆ ಇಂಥ ದೌರ್ಜನ್ಯ? ಯಾವತ್ತಾದರೂ ಯೋಚಿಸಿದ್ದೀರಾ? ದಶಕಗಳಿಂದ ಕನ್ನಡದ ಮಕ್ಕಳು ಈ ದೌರ್ಜನ್ಯ ಅನುಭವಿಸಿದ್ದಾರೆ. ಇನ್ನೂ ಎಷ್ಟು ಕಾಲ ಈ ಮಾನಸಿಕ ಅತ್ಯಾಚಾರವನ್ನು ಅನುಭವಿಸಬೇಕು ಎಂದು ಪ್ರಶ್ನಿಸಿದೆ.

























