ಪುತ್ತೂರು: ಅಕ್ಷಯ ಪದವಿ ಕಾಲೇಜಿನಲ್ಲಿ ಅದ್ವಯ ಕನ್ನಡ ಸಾಹಿತ್ಯ ಸಂಘದಿಂದ ಅಂಕುರ ಭಿತ್ತಿಪತ್ರ ಅನಾವರಣ ಕಾರ್ಯಕ್ರಮವು ನಡೆಯಿತು.
ಕರ್ನಾಟಕ ಸಂಘ, ಪುತ್ತೂರು ಇದರ ಅಧ್ಯಕ್ಷ
ಪುರಂಧರ ಭಟ್ ಬಿ. ಇವರು ಅಂಕುರ ಭಿತ್ತಿಪತ್ರಿಕೆಯ ಅನಾವರಣ ಮಾಡಿ, ದೀಪ ಪ್ರಜ್ವಲನೆಗೈದರು. ಬಳಿಕ ಮಾತನಾಡಿದ ಅವರು, ತಮ್ಮ ಬಾಲ್ಯದ ದಿನಗಳಲ್ಲಿನ ನೆನಪನ್ನು ಬಿತ್ತರಿಸಿ ಮುಂದಿನ ದಿನಗಳಲ್ಲಿ ಅಂಕುರ ಹೆಮ್ಮರವಾಗುವಂತೆ ನಿಮ್ಮ ಭವಿಷ್ಯವು ಉಜ್ವಲವಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ಉಮೇಶ್ ನಾಯಕ್ ಇವರು ವಿದ್ಯಾರ್ಥಿಗಳಿಗೆ ಭಿತ್ತಿಪತ್ರ ಸಾಹಿತ್ಯದ ಮೊದಲ ಹಂತ. ನೀವು ಇದರ ಸದುಪಯೋಗ ಪಡೆದುಕೊಂಡು ಸಾಹಿತ್ಯದ ವಿಷಯಗಳನ್ನು ಕಲಿಯಲು ಮತ್ತು ವಿಸ್ತರಿಸಲು ಉತ್ತಮ ಅವಕಾಶ ಎಂದು ಹೇಳಿ ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಜಯಂತ್ ನಡುಬೈಲು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಸಾಹಿತ್ಯದ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರೆಸಿ ಮತ್ತು ಇದನ್ನು ಹವ್ಯಾಸವಾಗಿ ಬೆಳೆಸಿಕೊಳ್ಳಿ ಮುಂದೆ ಅದೇ ಹವ್ಯಾಸ ನಿಮ್ಮಲ್ಲಿ ಕೌಶಲಗಳನ್ನು ಬೆಳೆಸುವಂತೆ ಮಾಡುತ್ತದೆ ಎಂದು ಹೇಳಿದರು.
ಇದೇ ವೇಳೆ ಕಾಲೇಜಿನ ಆರು ವಿಭಾಗಕ್ಕೆ ಒಂದರಂತೆ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನವನ್ನು ನೀಡಲಾಯಿತು. ಬಹುಮಾನ ಪಡೆದುಕೊಂಡ ವಿದ್ಯಾರ್ಥಿಗಳು ಎಲ್ಲರಿಗೂ ವಾಚನ ಮಾಡಲು ಅವಕಾಶ ಸಿಗಬೇಕೆಂದು ಪುಸ್ತಕಗಳನ್ನು ಗ್ರಂಥಾಲಯಕ್ಕೆ ಹಸ್ತಾಂತರ ಮಾಡಿದರು.
ಕಾರ್ಯಕ್ರಮದಲ್ಲಿ ಗಣ್ಯರ ಜೊತೆ ಅದ್ವಯ ಕನ್ನಡ ಸಾಹಿತ್ಯ ಸಂಘದ ಸಂಯೋಜಕ ಹರೀಶ್ಚಂದ್ರ, ಅಕ್ಷಯ ಕಾಲೇಜಿನ ಉಪ ಪ್ರಾಂಶುಪಾಲ ರಕ್ಷಣ್, ಅದ್ವಯ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸಂತೋಷ್ ಮತ್ತು ಕಾರ್ಯದರ್ಶಿ ಸುದೀಪ್ ಉಪಸ್ಥಿತರಿದ್ದರು.
ದೀಪಶ್ರೀ ಪ್ರಾರ್ಥನೆ ಮಾಡಿದರು. ಉಪನ್ಯಾಸಕ ಹರಿಶ್ಚಂದ್ರ ಪ್ರಸ್ತಾವನೆಗೈದರು. ವಿದ್ಯಾರ್ಥಿಗಳಾದ ಕೋಮಲಾಕ್ಷಿ ಮತ್ತು ಕನಕ ಅತಿಥಿಗಳ ಪರಿಚಯ ವಾಚಿಸಿದರು. ಉಪನ್ಯಾಸಕಿ ರಶ್ಮಿತಾ ಎಸ್. ಬಹುಮಾನಿತರ ಪಟ್ಟಿ ವಾಚಿಸಿದರು. ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಲಾವಣ್ಯ ವಂದಿಸಿದರು.

























