ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟು ಶಮನಕ್ಕೆ ಭಾರತ ಪ್ರಯತ್ನ ನಡೆಸಬೇಕಿತ್ತು ಎಂಬ ವಿಪಕ್ಷಗಳ ಟೀಕೆಗೆ ಕೇಂದ್ರ ಸರ್ಕಾರ ತಕ್ಕ ತಿರುಗೇಟು ನೀಡಿದೆ.
ಕೇಂದ್ರ ಸರ್ಕಾರದ ಸರ್ವಪಕ್ಷ ಸಭೆಯಲ್ಲಿ ಈ ಬಗ್ಗೆ ಮಾತನಾಡಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, ಯುದ್ಧ ನಿಲ್ಲಿಸುವಂತೆ ಮಾತುಕತೆ ನಡೆಸಲು ಭಾರತವು ಪಾಕಿಸ್ತಾನದ ಹಾಗೆ ದಲ್ಲಾಳಿಯಲ್ಲ. ಈ ಸಂಘರ್ಷದಿಂದ ಎಲ್ಲರಿಗೂ ತೊಂದರೆಯಾಗುತ್ತಿದ್ದು, ತಕ್ಷಣ ಇದನ್ನು ನಿಲ್ಲಿಸಬೇಕು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ಗೆ ಮೋದಿ ಹೇಳಿದ್ದಾರೆ. ಪಾಕಿಸ್ಥಾನವು ಮಧ್ಯಸ್ಥಿಕೆ ವಹಿಸುತ್ತಿರುವುದು ಹೊಸ ವಿಚಾರವೇನಲ್ಲ. 1981ರಿಂ ದಲೂ ಅಮೆರಿಕವು ಪಾಕಿಸ್ಥಾನವನ್ನು ಬಳಸಿಕೊಳ್ಳುತ್ತಲೇ ಇದೆ. ನಾವು ಅವರಂತೆ ದಲ್ಲಾಳಿಗಳಲ್ಲ ಎಂದು ತಿಳಿಸಿದ್ದಾರೆ.
ಜತೆಗೆ ಖಮೇನಿ ಸಾವಿಗೆ ಸರ್ಕಾರ ಸಂತಾಪ ಸೂಚಿಸದೇ ಮೌನ ವಹಿಸಿತ್ತು ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಅವರು, ಪ್ರತೀ ಬೆಳವಣಿಗೆಗೂ ನಾವು ಪ್ರತಿಕ್ರಿಯಿಸುತ್ತಿದ್ದೇವೆ. ಇರಾನ್ ರಾಯಭಾರ ಕಚೇರಿ ತೆರೆದ ತತ್ಕ್ಷಣವೇ ವಿದೇಶಾಂಗ ಕಾರ್ಯದರ್ಶಿ ಅಲ್ಲಿಗೆ ಭೇಟಿ ನೀಡಿ, ಸಂತಾಪ ಪುಸ್ತಕದಲ್ಲಿ ಸಹಿ ಹಾಕಿದ್ದಾರೆ ಎಂದಿದ್ದಾರೆ.
ಕೊಲ್ಲಿ ರಾಷ್ಟ್ರಗಳಲ್ಲಿನ ಭಾರತೀಯರ ರಕ್ಷಣೆ ಹಾಗೂ ದೇಶೀಯ ಬೇಡಿಕೆಯನ್ನು ಪೂರೈಸುವುದಕ್ಕೆ ಸರ್ಕಾರವು ಆದ್ಯತೆ ನೀಡುತ್ತಿದ್ದು, ಅದರಲ್ಲಿ ಈವರೆಗೆ ಯಶಸ್ವಿಯಾಗಿದೆ ಎಂದು ಸರಕಾರವು ವಿಪಕ್ಷಗಳಿಗೆ ಮಾಹಿತಿ ನೀಡಿದೆ. ಹೀಗಿದ್ದರೂ ಸಭೆಯು ತೃಪ್ತಿಕರವಾಗಿರಲಿಲ್ಲ ಎಂದು ಆರೋಪಿಸಿರುವ ವಿಪಕ್ಷಗಳು, ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿವೆ ಎನ್ನಲಾಗಿದೆ.

























