ಬೀದರ್: ಆನ್ಲೈನ್ ಗೇಮ್ಸ್ ಹುಚ್ಚಿಗೆ ಹಣ ಕಳಕೊಂಡ ನೋವಿನಲ್ಲಿ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್ನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದಿದೆ.
ಮೃತನನ್ನು ಅಂತಿಮ ವರ್ಷದ ವೈದ್ಯಕೀಯ ಪದವಿ ಓದುತ್ತಿದ್ದ ಅನಿಷ್ಕಾರ್ ಚೌಹಾಣ್ ಎಂದು ಗುರುತಿಸಲಾಗಿದೆ.
ಕಲ್ಬುರ್ಗಿಯ ಚಿಂಚೋಳಿ ತಾಲೂಕಿನ ಸಲಗರ್ ಗ್ರಾಮದ ಯುವಕ ಈತ. ಆನ್ಲೈನ್ ಗೇಮ್ಸ್ ಚಟಕ್ಕೆ ಬಿದ್ದು ಹಣ ಕಳೆದುಕೊಂಡಿದ್ದ. ಇದರಿಂದ ಮನನೊಂದು ಕಾಲೇಜಿನ ವಸತಿ ಗೃಹದಲ್ಲೇ ನೇಣಿಗೆ ಕೊರಳೊಡ್ಡಿ ಸಾವನ್ನಪ್ಪಿದ್ದಾನೆ.
ಅನಿಷ್ಕಾರ್ ತನ್ನ ಸ್ನೇಹಿತನಿಂದಲೂ ಸುಮಾರು ಎಪ್ಪತ್ತು ಸಾವಿರ ರೂ. ಸಾಲವನ್ನು ಗೇಮಿಂಗ್ಗಾಗಿ ಮಾಡಿದ್ದ. ಆದರೆ ಈತ ಅದರಲ್ಲಿ ಎಂಬತ್ತು ಸಾವಿರ ರೂ. ಗಳನ್ನು ಕಳೆದುಕೊಂಡಿದ್ದ. ಇದರಿಂದ ನೊಂದು ನೇಣಿಗೆ ಶರಣಾಗಿದ್ದಾನೆ. ಈತನ ಮೊಬೈಲ್ನಲ್ಲಿ ಆನ್ಲೈನ್ ಗೇಮಿಂಗ್ಗೆ ಸಂಬಂಧಿಸಿದ ಹಲವಾರು ಮೆಸೇಜ್ಗಳು ಸಹ ಕಂಡುಬಂದಿವೆ.
ಮೃತನ ಪೋಷಕರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

























