ಫೇಸ್ಬುಕ್ ನಕಲಿ ಖಾತೆ ಮೂಲಕ ವಿಡಿಯೋ ಹಂಚುತ್ತಿದ್ದ ಪಾತಕಿ
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ತಿರುಚಿದ ವಿಡಿಯೋಗಳನ್ನು ಸೃಷ್ಟಿಸಿ ಹಂಚಿಕೊಂಡು ಸಮಾಜದಲ್ಲಿ ಕೋಮು ದ್ವೇಷದ ಕಿಚ್ಚು ಹಚ್ಚಲು ಯತ್ನಿಸಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ನಿವಾಸಿ ಮಹಮ್ಮದ್ ರಫೀಕ್ (38) ಬಂಧಿತ ಆರೋಪಿ,
ಈತ ನಝೀರ ಮಂಗಳೂರು ಫೇಸ್ಬುಕ್ ಖಾತೆಯ ಮೂಲಕ ವಿಡಿಯೋಗಳನ್ನು ಹರಿಬಿಡುತ್ತಿದ್ದ. ಕಳೆದ ಅಕ್ಟೋಬಋನಲ್ಲಿ ಈತ ತನ್ನ ಫೇಸ್ಬುಕ್ ಖಾತೆಯ ಮೂಲಕ ಎಐ ತಂತ್ರಜ್ಞಾನ ಬಳಸಿ ಸಿದ್ಧಪಡಿಸಿದ ಪ್ರಚೋದನಾಕಾರಿ ವಿಡಿಯೋವೊಂದನ್ನು ಶೇರ್ ಮಾಡಿದ್ದ. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಾಗಿತ್ತು. ಅಂದಿನಿಂದ ತಲೆಮರೆಸಿಕೊಂಡಿದ್ದ ಈ ಫೇಕ್ ಐಡಿ ಖದೀಮನಿಗಾಗಿ ಪೊಲೀಸರು ಬಲೆ ಬೀಸಿದ್ದರು.
ತಾಂತ್ರಿಕ ವಿಶ್ಲೇಷಣೆಯ ಮೂಲಕ ಆರೋಪಿಯ ಸುಳಿವು ಪತ್ತೆಹಚ್ಚಿದ ಮಂಗಳೂರು ಪೊಲೀಸರು, ಮಾ.22ರಂದು ಬೆಂಗಳೂರಿನಲ್ಲಿದ್ದ ರಫೀಕ್ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

























