ಮಂಗಳೂರು: ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಅವರು ನನಗೆ, ನನ್ನ ಅಕ್ಕನ ಮಗ ಹಾಗೂ ನನ್ನ ಮಗನಿಗೆ ಮಾನಸಿಕ ಹಿಂಸೆ, ಜೀವಹಾನಿ ಬೆದರಿಕೆ, ಮಾನಹಾನಿ ಹಾಗೂ ಲೈಂಗಿಕ ನೀಡಿದ್ದಾರೆ. ಸದ್ಯ ಅಮಾನತ್ತಿನಲ್ಲಿರುವ ಇನ್ಸ್ಪೆಕ್ಟರ್ ಸಂದೇಶ್ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಕಾರ್ಕಳದ ಸುಮತಿ ನಾಯಕ್ ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹೋದರಿ ಪ್ರಫುಲ್ಲ ಅವರ ಸಹಕಾರದಿಂದ ನಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಅವರ ಮೊಬೈಲ್, ಬ್ಯಾಂಕ್ ಸ್ಟೇಟ್ಮೆಂಟ್ ಇತ್ಯಾದಿಗಳನ್ನು ಪರಿಶಿಲಿಸಿದರೆ ಸತ್ಯ ಹೊರಬರುತ್ತದೆ ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ಮತ್ತು ಆಡಿಯೋದಲ್ಲಿ ಸಂದೇಶ್ ಮಹಿಳೆಯರ ಜೊತೆಗೆ ಅಸಭ್ಯವಾಗಿ ಮಾತನಾಡಿರುವುದು ಮತ್ತು ಸಮವಸ್ತ್ಗರದಲ್ಲಿರುವಾಗಲೇ ಮಹಿಳೆಯ ಕೈಹಿಡಿದು ಡಾಯಾನ್ಸ್ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಸುಮೋಟೊ ಕೇಸ್ ದಾಖಲಿಸಲು ಇಷ್ಟು ಸಾಕ್ಷಿ ಸಾಕ ಎಂದಿದ್ದಾರೆ.
ಅಕ್ಕನ ಮಗನೇ ತಮಗಾದ ಅನ್ಯಾಯದ ವಿರುದ್ಧ ಕಾನೂನು ಪ್ರಾಧಿಕಾರದಲ್ಲಿ ದೂರು ಸಲ್ಲಿಸಿದ್ದು, ನ್ಯಾಯಾಧೀಶರು ಇನ್ಸ್ಪೆಕ್ಟರ್ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶಿಸಿದ್ದಾರೆ. ಆದರೆ ಇನ್ಸ್ಪೆಕ್ಟರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದರು. ಕೆಲ ದಿನಗಳ ಹಿಂದೆ ಪ್ರೆಸ್ಮೀಟ್ ಕರೆದ ಪ್ರಫುಲ್ಲ ಅವರು ನನ್ನ ಬಗ್ಗೆ ಹೇಳಿದ ಎಲ್ಲ ಮಾತುಗಳು ಸುಳ್ಳುಗಳಾಗಿವೆ. ಇದರ ಬಗ್ಗೆ ದಾಖಲೆಗಳನ್ನು ನಾನು ಒದಗಿಸುವುದಾಗಿ ಹೇಳಿದರು.
ಇನ್ಸ್ಪೆಕ್ಟರ್ ಸಂದೇಶ್ ಅವರ ಮೊಬೈಲ್ ಪರಿಶೀಲನೆ, ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ಅವರ ಐಬಿ ಗುಂಪಿನಲ್ಲಿ ಇರುವ ಎಲ್ಲಾ ಸಂಪರ್ಕಗಳ ಮೇಲೂ ತನಿಖೆ ನಡೆಯಬೇಕು. ಹಾಗೆಯೇ ಪ್ರಫುಲ್ಲ ಅವರ ಮೊಬೈಲ್ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನೂ ಪರಿಶೀಲಿಸಬೇಕು ಎಂದು ಆಗ್ರಹಿಸಿದರು. ಉನ್ನತ ಪೊಲೀಸ್ ಅಧಿಕಾರಿಗಳು ಸಂದೇಶ್ ಅವರನ್ನು ರಕ್ಷಿಸಲು ನೋಡುತ್ತಿದ್ದಾರೆ. ಮಂಗಳೂರಿನ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದಿದ್ದಾರೆ.
ಇದಕ್ಕೂ ಮೊದಲು ಇನ್ಸ್ಪೆಕ್ಟರ್ ಸಂದೇಶ ಪಿ.ಜಿ ದುರ್ನಡತೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದರು. ಇನ್ಸ್ಪೆಕ್ಟರ್ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳದ ಆರೋಪಗಳು ದುರುದ್ದೇಶಪೂರಿತವಾಗಿವೆ. ಮಂಗಳೂರು ನಗರ ಉಪವಿಭಾಗ ಎಸಿಪಿ ಶ್ರೀಕಾಂತ್ ಅವರು ಪ್ರಕರಣಕ್ಕೆ ಸಂಬಂಧಿಸಿ ಪ್ರಾಥಮಿಕ ತನಿಖೆ ವರದಿ ನೀಡಿದ್ದು, ಅದರಲ್ಲಿ ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಮಾಡಿದ ಆರೋಪಕ್ಕೆ ಪೂರಕವಾಗಿ ಯಾವುದೇ ಸತ್ಯಾಂಶ ಹಾಗೂ ಪೂರಕವಾದ ಸಾಕ್ಷ್ಯಾಧಾರಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋ ಮತ್ತು ವಿಡಿಯೋ ತಮ್ಮದೆಂದು ಮಹಿಳೆಯರು ಒಪ್ಪಿಕೊಂಡಿದ್ದಾರೆ. ಆದರೆ ಯಾವುದೇ ದೂರು ನೀಡಿಲ್ಲ. ಅಧಿಕಾರಿಯ ವಿರುದ್ಧ ಆಡಿಯೋ, ವಿಡಿಯೋಗಳಲ್ಲಿ ಕಂಡು ಬಂದಿರುವ ದುರ್ನಡತೆ ಗಂಭೀರವಾಗಿ ಪರಿಗಣಿಸಿ ಈಗಾಗಲೇ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ವೈಯಕ್ತಿಕ ದ್ವೇಷಕ್ಕಾಗಿ ಸುಳ್ಳು ದೂರುಗಳನ್ನು ನೀಡಿ ತನಿಖೆಯ ಹಾದಿ ತಪ್ಪಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಮಿಷನರ್ ಎಚ್ಚರಿಕೆ ನೀಡಿದ್ದಾರೆ. ಠಾಣೆಗೆ ಬರುವ ಮಹಿಳೆಯರ ರಕ್ಷಣೆ ಮತ್ತು ಅವರೊಂದಿಗೆ ಗೌರವಯುತವಾಗಿ ವರ್ತಿಸುವುದು ಪೊಲೀಸರ ಕರ್ತವ್ಯ. ಈ ಘಟನೆ ಇಡೀ ಇಲಾಖೆಗೆ ಪಾಠವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ವರ್ತನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.

























