ಹಿರಿಯ ಯಕ್ಷಗಾನ ಕಲಾವಿದ ಸೂರಿ ಕುಮೇರು ಗೋವಿಂದ ಭಟ್ಟರು ಇನ್ನಿಲ್ಲ

ಸುದೀರ್ಘ ಕಾಲ ಧರ್ಮಸ್ಥಳ ಮೇಳದಲ್ಲಿದ್ದ ಸವ್ಯಸಾಚಿ ಕಲಾವಿದ

ಮಂಗಳೂರು : ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ, ಏಳು ದಶಕಗಳ ಕಾಲ ರಂಗಸ್ಥಳವನ್ನೇ ಉಸಿರಾಗಿಸಿಕೊಂಡಿದ್ದ ಅದ್ವಿತೀಯ ವೇಷಧಾರಿ ಸೂರಿಕುಮೇರು ಕೆ. ಗೋವಿಂದ ಭಟ್ (90) ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

ಯಲಕ್ಷಗಾನದಿಂದ ನೇಪಥ್ಯಕ್ಕೆ ಸರಿದ ಬಳಿಕ ಹೆಚ್ಚಾಗಿ ತೀರ್ಥಹಳ್ಳಿಯಲ್ಲಿರುವ ಮಗನ ಮನೆಯಲ್ಲಿ ಇರುತ್ತಿದ್ದರು. ಇತ್ತೀಚೆಗಷ್ಟೆ ವಯೋಸಹಜ ಅನಾರೋಗ್ಯಕ್ಕೀಡಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಶುಕ್ರವಾರ ರಾತ್ರೊ 9.10ರ ಸುಮಾರಿಗೆ ತೀರ್ಥಹಳ್ಳಿಯಲ್ಲಿರುವ ಪುತ್ರನ ಮನೆಯಲ್ಲಿ ನಿಧನರಾಗಿದ್ದಾರೆ. ಅರ ಪತ್ನಿ ಸಾವಿತ್ರಿ ಅವರು ಕೋವಿಡ್‌ ಸಮಯದಲ್ಲಿ ಮೃತಪಟ್ಟಿದ್ದರು.























































 
 

1936ರಲ್ಲಿ ಬಂಟ್ವಾಳದ ಕೋಡಪದವಿನ ಕಡುಬಡತನದ ಗುಡಿಸಲಲ್ಲಿ ಜನಿಸಿದ ಗೋವಿಂದರ ಬಾಲ್ಯ ಕಣ್ಣೀರಿನ ಕತೆಯಾಗಿತ್ತು. ತಂದೆಯ ಅನಾರೋಗ್ಯ, ಆಸ್ತಿಗಾಗಿ ನಡೆದ ಸಂಘರ್ಷ, ಹೋಟೆಲ್‌ನಲ್ಲಿ ಎಂಜಲು ತಟ್ಟೆ ತೊಳೆದ ನೋವು… ಹೀಗೆ ಹಸಿವಿನ ಕಿಚ್ಚಿನಲ್ಲೇ ಬೆಂದು ಪುಟಕ್ಕಿಟ್ಟ ಚಿನ್ನದಂತೆ ಕಂಗೊಳಿಸಿದವರು ಭಟ್ಟರು.

1951ರಲ್ಲಿ ಬಾಲಗೋಪಾಲ ವೇಷದ ಮೂಲಕ ಧರ್ಮಸ್ಥಳ ಮೇಳದಲ್ಲಿ ಆರಂಭವಾದ ಅವರ ಕಲಾ ಪಯಣ, ಯಕ್ಷಗಾನದ ಇತಿಹಾಸದಲ್ಲೇ ಒಂದು ದಾಖಲೆಯಾಗಿ ಉಳಿಯುವಂಥದ್ದು. ಯಕ್ಷಗಾನದಲ್ಲಿ ಅವರೊಬ್ಬ ‘ಸವ್ಯಸಾಚಿ’. ತೆಂಕು-ಬಡಗು ಎಂಬ ಭೇದವಿಲ್ಲದೆ ಸ್ತ್ರೀ ವೇಷದಿಂದ ಹಿಡಿದು ರಕ್ಕಸ ವೇಷದವರೆಗೆ ಯಾವುದನ್ನಾದರೂ ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ಕಲೆಗಾರ. ಕೇವಲ ವೇಷಧಾರಿಯಷ್ಟೇ ಅಲ್ಲ ಅನಿವಾರ್ಯವಾದರೆ ಹಿಮ್ಮೇಳದಲ್ಲಿ ಚೆಂಡೆ-ಮದ್ದಳೆಯನ್ನೂ ನುಡಿಸಬಲ್ಲ, ಭಾಗವತಿಕೆಯನ್ನೂ ಮಾಡಬಲ್ಲ ಸರ್ವಾಂಗೀಣ ಪ್ರತಿಭೆ ಅವರದ್ದು. ಅಕ್ಷಯಾಂಬರ ವಿಲಾಸದ ಕೌರವನಾಗಿ ಅವರು ರಂಗಸ್ಥಳದಲ್ಲಿ ಅಬ್ಬರಿಸುತ್ತಿದ್ದರೆ ಪ್ರೇಕ್ಷಕರು ಮಂತ್ರಮುಗ್ಧರಾಗುತ್ತಿದ್ದರು.

ಸುರತ್ಕಲ್‌, ಕೂಡ್ಲು, ಇರಾ ಮೇಳಗಳಲ್ಲಿ ಇದ್ದರೂ ಅವರ ಬದುಕಿನ ಬಹುತೇಕ ವರ್ಷಗಳು ಕಳೆದಿರುವುದು ಧರ್ಮಸ್ಥಳ ಮೇಳದಲ್ಲಿ. ಪಂಚವಟಿಯ ಮಾಯಾ ಶೂರ್ಪನಖಿಯ ಸೊಬಗು ಅಥವಾ ಜಾಂಬವಂತನ ಗಾಂಭೀರ್ಯ—ಯಾವುದೇ ಪಾತ್ರವಾದರೂ ಅದಕ್ಕೆ ಜೀವ ತುಂಬುವ ಮಾಂತ್ರಿಕತೆ ಅವರಿಗೆ ಸಿದ್ಧಿಸಿತ್ತು. ಗೋವಿಂದ ಭಟ್ಟರು ಕೇವಲ ಪ್ರದರ್ಶನಕಾರರಾಗಿ ಉಳಿಯಲಿಲ್ಲ, ಅವರೊಬ್ಬ ಸಂಶೋಧಕರೂ ಹೌದು.

ತೆಂಕುತಿಟ್ಟಿನ ನೃತ್ಯ ವೈವಿಧ್ಯಕ್ಕೆ ಹೊಸ ಆಯಾಮ ನೀಡಲು ಅವರು ಪಟ್ಟ ಶ್ರಮ ಅನನ್ಯ. ಏಕತಾಳವೊಂದಕ್ಕೇ ದಾಖಲೆಯ 24 ವಿಧದ ಕುಣಿತಗಳನ್ನು ಆವಿಷ್ಕರಿಸಿ ಅಪ್ರತಿಮ ವಿದ್ವಾಂಸ ಶಿವರಾಮ ಕಾರಂತರಿಂದಲೇ ಶಹಬ್ಬಾಸ್ ಎನಿಸಿಕೊಂಡ ಧೀಮಂತ ಅವರು.
ಧರ್ಮಸ್ಥಳ ಯಕ್ಷಗಾನ ಕೇಂದ್ರದ ಗುರುಗಳಾಗಿ ನೂರಾರು ಶಿಷ್ಯರನ್ನು ರೂಪಿಸಿದ ಅವರು, ಏಳು ಪ್ರಸಂಗಗಳನ್ನು ರಚಿಸಿದ ಲೇಖಕರೂ ಹೌದು. ಜಪಾನ್‌ನಿಂದ ದುಬೈವರೆಗೆ ಯಕ್ಷಗಾನದ ಕಂಪನ್ನು ಪಸರಿಸಿ, ರಾಷ್ಟ್ರೀಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯೋಜನೆಗಳ ಗೋವಿಂದ ಭಟ್ಟರು ರಾಷ್ಟ್ರಪತಿಗಳ ಸಮ್ಮುಖದಲ್ಲೇ ಕಲೆಯ ಅಗ್ಗಳಿಕೆಯನ್ನು ಸಾರಿದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು.

​ಕಳೆದ ಐದು ದಶಕಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಅವಿಭಾಜ್ಯ ಅಂಗವಾಗಿದ್ದ ಅವರು ಇಳಿ ವಯಸ್ಸಿನಲ್ಲೂ ರಂಗಭೂಮಿಯ ಮೇಲಿನ ಮೋಹ ಬಿಟ್ಟವರಲ್ಲ. ಕಣ್ಣಿನ ದೃಷ್ಟಿ ಮಂಜಾಗುತ್ತಿದ್ದರೂ, ಶರೀರ ದಣಿಯುತ್ತಿದ್ದರೂ ರಂಗಸ್ಥಳ ಬಿಟ್ಟು ನನಗೇನು ಗತಿ? ಎಂದು ಕೇಳುತ್ತಿದ್ದ ಕಲಾತಪಸ್ವಿ.

ನೀವು ವೇಷ ಹಾಕದಿದ್ದರೂ ಪರವಾಗಿಲ್ಲ, ನಮ್ಮ ಮೇಳದ ಚೌಕಿಯಲ್ಲಿ ನೀವಿದ್ದರೆ ಸಾಕು ಎಂದು ಧರ್ಮಸ್ಥಳದ ಯಜಮಾನರು ಕರೆಯುವಷ್ಟು ಗೌರವ ಸಂಪಾದಿಸಿದ್ದ ಆ ಮಹಾಚೇತನ. ರಂಗದ ಮೇಲಿನ ಕೌರವ, ಕರ್ಣ ಇನ್ನು ನೆನಪು ಮಾತ್ರ. ತೆಂಕುತಿಟ್ಟಿನ ಒಂದು ಸುವರ್ಣ ಯುಗ ಇಂದು ಅಂತ್ಯಗೊಂಡಿದೆ. ಅವರ ಅಗಲಿಕೆ ಇಡೀ ಯಕ್ಷಗಾನ ರಂಗಕ್ಕೆ ಬಹುದೊಡ್ಡ ನಷ್ಟ.

error: Content is protected !!
Scroll to Top