ಹಾಸನ: ಗಂಡನ ಅನುಮಾನ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿಷ ಕುಡಿದು ಮಹಿಳೆಯೊಬ್ಬಳು ಆತ್ಮಹತ್ಯೆಗೆ ಪ್ರಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮೈಲಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಎಚ್. ಎಲ್. ಇಂದ್ರ (24) ಎಂದು ಗುರುತಿಸಲಾಗಿದೆ.
ಗಂಡನ ಮನೆಯಲ್ಲಿ ವಿಷ ಸೇವನೆ ಮಾಡಿದ್ದ ಅವರನ್ನು ಹಿಮ್ಸ್ಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಎಂ. ಎಚ್. ಸ್ವಾಮಿ ಜೊತೆಗೆ ಇಂದ್ರ ಅವರ ವಿವಾಹವಾಗಿತ್ತು. ಮದುವೆ ಸಮಯದಲ್ಲಿ ಮಹಿಳೆಯ ಮನೆಯವರು ಚಿನ್ನ, ಹಣ ನೀಡಿದ್ದರೂ ಮತ್ತಷ್ಟು ವರದಕ್ಷಿಣೆಗಾಗಿ ಗಂಡ ಪೀಡಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ಹಿಂದೆ ಈ ಸಂಬಂಧ ರಾಜಿ ಪಂಚಾಯತಿ ಕೂಡಾ ನಡೆದಿತ್ತು. ಆದರೆ ಗಂಡ ಮತ್ತೆ ತನ್ನ ಹಳೆಯ ಚಾಳಿ ಮುಂದುವರಿಸಿದ್ದ.
ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಪತಿ ಸ್ವಾಮಿ, ಅತ್ತೆ ಶಂಕ್ರಮ್ಮ ಮತ್ತು ಅತ್ತಿಗೆ ಪುಟ್ಟಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
























