ಬೆಂಗಳೂರು: ನಗರದಿಂದ ಕನ್ಯಾಕುಮಾರಿಯ ವರೆಗೆ ಸುಮಾರು 702 ಕಿ.ಮೀ. ಗಳಷ್ಟು ದೂರವನ್ನು ಬರೋಬ್ಬರಿ 5 ದಿನಗಳಲ್ಲಿ ಸೈಕಲ್ ಮೂಲಕ ಸವಾರಿ ನಡೆಸಿ ಮಾಜಿ ಸಚಿವ, ರಾಜಾಜಿನಗರದ ಶಾಸಕ ಎಸ್. ಸುರೇಶ್ ಕುಮಾರ್ (70) ಸಾರ್ವಜನಿಕರು ಹುಬ್ಬೇರಿಸುವಂತೆ ಸಾಧನೆ ಮೆರೆದಿದ್ದಾರೆ.
ಸುರೇಶ್ ಕುಮಾರ್ ಅವರು ಕಳೆದ ವರ್ಷ ಅಪರೂಪದ ನರದ ಸಮಸ್ಯೆಗೆ ತುತ್ತಾಗಿ ಚಿಕಿತ್ಸೆ ಪಡೆದವರು. ಅವರಿಗೆ ತಮ್ಮ ಕೈ ಬೆರಳುಗಳನ್ನು ಅಲುಗಾಡಿಸಲೂ ಸಾಧ್ಯವಿಲ್ಲದೆ ಹಾಸಿಗೆ ಹಿಡಿಯುವ ಸ್ಥಿತಿ ಬಂದಿತ್ತು. ಆದರೆ ಸೂಕ್ತ ಚಿಕಿತ್ಸೆ ಮತ್ತು ತಾನು ಮೊದಲಿನಂತಾಗಬೇಕು ಎನ್ನುವ ಅಪ್ರತಿಮ ಮನೋಬಲದ ಮೂಲಕ ಅವರು ತಮ್ಮ ದೈಹಿಕ ಶಕ್ತಿಯನ್ನು ಮರಳಿ ಪಡೆದಿದ್ದಾರೆ. ಈ ಪ್ರಯತ್ನಕ್ಕೆ ಸೈಕ್ಲಿಂಗ್ ಅವರಿಗೆ ನೆರವಾಯಿತು ಎಂದು ಅವರು ಹೇಳಿದ್ದಾರೆ.
ಅರೋಗ್ಯ ಸರಿಯಿಲ್ಲದೆ ಮುಂದೂಡಲ್ಪಟ್ಟಿದ್ದ ಈ ಸೈಕಲ್ ಸವಾರಿಯನ್ನು ಅವರು ಡಿಸೆಂಬರ್ 2025 ರಲ್ಲಿ ಸಂಪೂರ್ಣ ಮಾಡಿದ್ದಾರೆ. ಅವರು ರಾಜಾಜಿನಗರದ ಪೆಡಲ್ ಪವರ್ ತಂಡದ 12 ಮಂದಿ ಸದಸ್ಯರ ಜೊತೆಗೆ ಬೆಂಗಳೂರು ಟು ಕನ್ಯಾಕುಮಾರಿ ಸೈಕ್ಲಿಂಗ್ ಯಾತ್ರೆಯನ್ನು ಪೂರ್ಣಗೊಳಿಸಿ ಸಾಧನೆಗೆ ವಯಸ್ಸು ಮಾನದಂಡವಲ್ಲ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.
ಸುರೇಶ್ ಕುಮಾರ್ ಅವರಿಗೆ ಬಾಲ್ಯದಿಂದಲೇ ಸೈಕ್ಲಿಂಗ್ ಎಂದರೆ ಅಚ್ಚುಮೆಚ್ಚು. ವಕೀಲರಾಗಿ ವೃತ್ತಿ ಆರಂಭಿಸಿದ ದಿನಗಳಲ್ಲಿಯೂ ಹೈಕೋರ್ಟ್ಗೆ ಸೈಕಲ್ನಲ್ಲೇ ಹೋಗುತ್ತಿದ್ದರು. ರಾಜಕೀಯ ಪ್ರವೇಶಿಸಿದ ನಂತರ ಸ್ವಲ್ಪ ಸಮಯ ಬಿಡುವು ಸಿಕ್ಕಿರಲಿಲ್ಲ. ಆದರೆ ಈಗ ಹೊಸ ಉದ್ದೇಶದೊಂದಿಗೆ ಮತ್ತೆ ಸೈಕ್ಲಿಂಗ್ ಆರಂಭಿಸಿದ್ದೇನೆ” ಎನ್ನುತ್ತಾರೆ ಅವರು.
ತಂಡದ ಸದಸ್ಯ ಪ್ರಶಾಂತ್ ಸದಾಶಿವ ಪಾಟೀಲ್ ಮಾತನಾಡಿ, “ಸುರೇಶ್ ಕುಮಾರ್ ಪ್ರಯಾಣದ ಉದ್ದಕ್ಕೂ ಸ್ಪೂರ್ತಿದಾಯಕ ಕಥೆಗಳನ್ನು ಹೇಳುತ್ತಾ ತಂಡದ ಒಗ್ಗಟ್ಟನ್ನು ಕಾಯ್ದುಕೊಂಡರು. ಪ್ರತಿಯೊಂದು ಕ್ಷೇತ್ರವೂ ಸೈಕ್ಲಿಂಗ್ ಅನ್ನು ಪ್ರೋತ್ಸಾಹಿಸುವ ಅಗತ್ಯವಿದೆ” ಎಂದರು. ಗಂಭೀರ ಅನಾರೋಗ್ಯದಿಂದ ಗುಣಮುಖರಾಗಿ 70ರ ವಯಸ್ಸಿನಲ್ಲಿ ಸಾಹಸ ಮಾಡಿರುವುದು ಎಲ್ಲರಿಗೂ ಮಾದರಿಯೇ ಸರಿ.
























