ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಬಸ್
ಹೈದರಾಬಾದ್ : ಆಂಧ್ರಪ್ರದೇಶ ಅಲ್ಲೂರು ಎಂಬಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ 9 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಟ್ಟೆಯ ರಾಶಿಯಂತೆ ಬಿದ್ದಿದ್ದವು. ಬೆಳಗಿನ ಜಾವ 5.30ರ ಸಮಯದಲ್ಲಿ ಅಲ್ಲೂರಿನ ತುಳಸಿಪಕಲು ಗ್ರಾಮದ ಬಳಿ ನಡೆದಿದೆ. ಜಿಲ್ಲಾಧಿಕಾರಿಗಳ ಪ್ರಕಾರ, ಬಸ್ಸಿನಲ್ಲಿ 35 ಪ್ರಯಾಣಿಕರು, ಇಬ್ಬರು ಚಾಲಕರು ಮತ್ತು ಒಬ್ಬ ಕ್ಲೀನರ್ ಇದ್ದರು. ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ, ಏಳು ಮಂದಿಯನ್ನು ಸ್ಥಳದಿಂದ 15 ಕಿ.ಮೀ ದೂರದಲ್ಲಿರುವ ಸಿಎಚ್ಸಿ ಚಿಂತೂರಿಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಕಡಿದಾದ ತಿರುವಿನಲ್ಲಿ ಸಾಗುವಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಪಕ್ಕಕ್ಕೆ ಉರುಳಿ ಕಡಿದಾದ ಇಳಿಜಾರಿನ ಕೆಳಗೆ ಬಿದ್ದಿದೆ ಎಂದು ವರದಿಯಾಗಿದೆ. ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ತಂಡಗಳು ಪ್ರಯಾಣಿಕರಿಗೆ ಸಹಾಯ ಮಾಡಲು ಮತ್ತು ಅವಶೇಷಗಳನ್ನು ತೆರವುಗೊಳಿಸಲು ಸ್ಥಳಕ್ಕೆ ಧಾವಿಸಿವೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿ, ಗಾಯಾಳುಗಳಿಗೆ ನೀಡಲಾಗುವ ಪರಿಹಾರದ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಹಿರಿಯ ಅಧಿಕಾರಿಗಳು ತಕ್ಷಣ ಅಪಘಾತ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳುವಂತೆ ಅವರು ಆದೇಶಿಸಿದರು ಮತ್ತು ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಲು ಮತ್ತು ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ನೀಡಬೇಕು ಎಂದು ಸೂಚಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಭದ್ರಾಚಲಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಎಎಸ್ಆರ್ ಜಿಲ್ಲಾಧಿಕಾರಿ ದಿನೇಶ್ ಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
























