ಮಂಗಳೂರು ಕುಕ್ಕರ್ ಬಾಂಬ್ ಮತ್ತು ಮಟ್ಟಣ್ಣವರ್ ಬಾಂಬ್ ನಡುವೆ ಲಿಂಕ್ ಇರುವ ಅನುಮಾನ
ಬೆಂಗಳೂರು: ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಈ ಹಿಂದೆ ವಿಧಾನಸೌಧದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣದ ಮರು ತನಿಖೆಯಾಗಬೇಕೆಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹಾಗೂ ಗೃಹ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿದ್ದ ಗಿರೀಶ್ ಮಟ್ಟಣ್ಣವರ್ ವಿಧಾನಸಭೆಯಲ್ಲಿ ಬಾಂಬಿಟ್ಟ ಕೃತ್ಯದಿಂದಲೇ ಕುಖ್ಯಾತಿಗೊಳಗಾಗಿದ್ದರು. ಈ ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆಯಾಗಿದ್ದರೂ ಪೊಲೀಸ್ ಇಲಾಖೆಯಿಂದ ಅವರು ವಜಾಗೊಂಡಿದ್ದರು. ಈಗ ಮತ್ತೆ ಈ ಪ್ರಕರಣಕ್ಕೆ ಜೀವ ಕೊಡುವ ಪ್ರಯತ್ನ ನಡೆದಿದೆ. ವಿಧಾನಸೌಧದ ಬಳಿ ಬಾಂಬ್ ಇಟ್ಟಿದ್ದ ಕೇಸ್ (ಕ್ರೈಂ ನಂ. 243/2005) ಅನ್ನು ಪುನರ್ತೆರೆದು ತನಿಖೆ ನಡೆಸಬೇಕು. ಜತೆಗೆ ಎನ್ಐಎ ತನಿಖೆಗೆ ಒಳಪಡಿಸಬೇಕು ಎಂದು ಸಂಬರಗಿ ಆಗ್ರಹಿಸಿದ್ದಾರೆ.
ತಾವೇ ಬಾಂಬ್ ತಯಾರಿಸಿ ಇಟ್ಟಿರುವುದಾಗಿ ಒಪ್ಪಿಕೊಂಡಿರುವ ರೀತಿಯಲ್ಲಿ ಗಿರೀಶ್ ಮಟ್ಟಣ್ಣವರ್ ಹಲವಾರು ವಿಡಿಯೋಗಳಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. ಅವರು ಆ ರೀತಿಯ ಹೇಳಿಕೆ ನೀಡಿರುವುದು ಸ್ಪಷ್ಟವಾಗಿದೆ. ಹೀಗಾಗಿ ಈ ಕೇಸ್ ಈಗಾಗಲೇ ಕೋರ್ಟ್ನಲ್ಲಿ ಖುಲಾಸೆಯಾಗಿದ್ದರೂ ಹೊಸ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಪುನಃ ತನಿಖೆ ನಡೆಸುವ ಅಗತ್ಯವಿದೆ ಎಂದು ಪ್ರಶಾಂತ್ ಸಂಬರಗಿ ದೂರಿನಲ್ಲಿ ಹೇಳಿದ್ದಾರೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಕೇಸ್ ತನಿಖೆ ವೇಳೆ ಉಗ್ರರ ಟಾರ್ಗೆಟ್ ಧರ್ಮಸ್ಥಳ ಆಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. ಸದ್ಯ ಗಿರೀಶ್ ಮಟ್ಟಣ್ಣವರ್ ಕೂಡ ಧರ್ಮಸ್ಥಳ ವಿರುದ್ಧದ ಷಡ್ಯಂತ್ರದಲ್ಲಿ ಸಕ್ರಿಯವಾಗಿದ್ದಾರೆ. ಹೀಗಾಗಿ ಈ ಎರಡು ಪ್ರಕರಣಗಳ ನಡುವೆ ಲಿಂಕ್ ಇದೆಯೇ ಎಂಬುದನ್ನು ತನಿಖೆ ನಡೆಸಬೇಕಿದೆ ಎಂದು ಪ್ರಶಾಂತ್ ಸಂಬರಗಿ ಉಲ್ಲೇಖಿಸಿದ್ದಾರೆ.
ಗಿರೀಶ್ ಮಟ್ಟಣ್ಣವರ್ ಅವರನ್ನು ಎನ್ಐಎ ತನಿಖೆಗೆ ಒಳಪಡಿಸಬೇಕು. ಶಾಸಕರ ಭವನದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣವನ್ನೂ ಮರು ತನಿಖೆ ಮಾಡಬೇಕು. ಜಿಲೆಟಿನ್ ಹಾಗೂ ಇತರ ಸ್ಫೋಟಕ ವಸ್ತುಗಳಿಂದ ಬಾಂಬ್ ತಯಾರು ಮಾಡುವುದು ಸುಲಭ ಎಂದು ಅವರೇ ಹೇಳಿಕೊಂಡಿದ್ದಾರೆ ಎಂದು ಸಂಬರಗಿ ದೂರಿನಲ್ಲಿ ಹೇಳಿದ್ದಾರೆ.
ಪ್ರಶಾಂತ್ ಸಂಬರಗಿ ಅವರು ಹದಿನೈದು ವಿಡಿಯೋಗಳ ಜೊತೆಗೆ ಈ ಸಂಬಂಧ ದಾಖಲೆಗಳನ್ನು ಪೊಲೀಸ್ ಆಯುಕ್ತರಿಗೆ ಹಾಗೂ ಗೃಹ ಇಲಾಖೆ ಕಾರ್ಯದರ್ಶಿಗೆ ಸಲ್ಲಿಸಿದ್ದು, ಪ್ರಕರಣದ ಮರು ತನಿಖೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
























