ಬೆಂಗಳೂರು: ಜತಿಗಣತಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯನ್ನು ಕಾಂಪೌಂಡ್ ಒಳಗೆ ಕೂಡಿ ಹಾಕಿದ್ದ ವ್ಯಕ್ತಿಯನ್ನು ಕೊಡಿಗೇಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಭದ್ರಪ್ಪ ಲೇಔಟ್‌ನ ಸಂದೀಪ್ (31) ಎಂದು ಗುರುತಿಸಲಾಗಿದೆ.
ಸಂದೀಪ್ ಮನೆಗೆ ಸಮೀಕ್ಷೆ ನಡೆಸಲು ಶಿಕ್ಷಕಿ ಸುಶೀಲಾ ತೆರಳಿದ್ದು, ಈ ವೇಳೆ ಅವರ ತಾಯಿಯ ಬಳಿ ದಾಖಲೆಗಳನ್ನು ಕೇಳಿದ್ದಾರೆ. ಆಗ ಅಲ್ಲಿಗೆ ಬಂದ ಸಂದೀಪ್ ನೀವು ಯಾರು?, ನಿಮ್ಮನ್ನು ಸಮೀಕ್ಷೆಗೆ ಕಳುಹಿಸಿದ್ದು ಯಾರು?, ನೀವು ಸರ್ಕಾರಿ ನೌಕರರು ಎಂದು ನಂಬುವುದು ಎಂದೆಲ್ಲಾ ಪ್ರಶ್ನೆ ಮಾಡಿದ್ದಾನೆ. ಜೊತೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಆ ಬಳಿಕ ತನ್ನ ಮನೆಯ ಕಾಂಪೌಂಡ್ ಒಳಗೆ ಬಂಧಿಸಿದ್ದಾನೆ. ಬಳಿಕ ಆರೋಪಿ ಪರಾರಿಯಾಗಿದ್ದಾನೆ.
ಸುಶೀಲಾ ಅವರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಪೊಲೀಸರು ಬಂದು ಅವರನ್ನು ಬಿಡಿಸಿದ್ದಾರೆ. ಶಿಕ್ಷಕಿಯ ದೂರಿನನ್ವಯ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
























