ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಾಮಾನ್ಯ ಸಭೆ | ಗೃಹ ಲಕ್ಷ್ಮಿ ಯೋಜನೆಯಡಿ ಎದುರಾಗಿರುವ ಸಮಸ್ಯೆಗಳನ್ನು ಫಲಾನುಭವಿಗಳಿಗೆ ವಿವರಿಸಿ : ಉಮಾನಾಥ ಶೆಟ್ಟಿ

ಪುತ್ತೂರು: ಈಗಾಗಲೇ ಐ.ಟಿ., ಜಿ.ಎಸ್.ಟಿ. ಸಮಸ್ಯೆಗಳಿಂದ ಹಲವು ಗೃಹ ಲಕ್ಷ್ಮಿ ಫಲಾನುಭವಿಗಳು ವಂಚಿತರಾಗಿದ್ದಾರೆ. ಅಂತಹ ಫಲಾನುಭವಿಗಳಿಗೆ‌ ಇಲಾಖೆ ಹಾಗೂ ಗ್ರಾಮ ವನ್ ಕೇಂದ್ರದಲ್ಲಿಯೇ ಸರಿಯಾದ ಮಾಹಿತಿಯನ್ನು ನೀಡಬೇಕು ಎಂದು ಪುತ್ತೂರು ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಉಮಾನಾಥ ಶೆಟ್ಟಿ ತಿಳಿಸಿದರು.

ಅವರು ಸೆ.9 ರಂದು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪುತ್ತೂರು ತಾಲೂಕು ಪಂಚ  ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿಯಿಂದ ಅನರ್ಹರಾದ ಫಲಾನುಭವಿಗಳ ಪಟ್ಟಿಯನ್ನು ಸಲ್ಲಿಸಲು ಇಲಾಖಾ ಆಧಿಕಾರಿಗಳಿಗೆ ಸೂಚಿಸಿದರು. ಮುಂದುವರಿದು ಸೆ.16 ರಂದು ತಾ.ಪಂ.ಸಭಾಂಗಣದಲ್ಲಿ ಗೃಹಲಕ್ಷ್ಮಿ ಹೊಸ ಅರ್ಜಿ ನೋಂದಣಿ ಶಿಬಿರ‌ ಹಮ್ಮಿಕೊಳ್ಳಲು ಸೂಚಿಸಿದರು.





















































 
 

ಸಮಿತಿ‌ ಸದಸ್ಯ ಶೇಸಪ್ಪ ನೆಕ್ಕಿಲು ಮಾತನಾಡಿ, ಉಪ್ಪಿನಂಗಡಿ- ಸುಬ್ರಹ್ಮಣ್ಯ ದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ ಬದಿಯಲ್ಲಿ ಮೆಸ್ಕಾಂ ಇಲಾಖೆ ಕರೆಂಟ್ ಕಂಬಗಳನ್ನು ರಸ್ತೆ ಇಕ್ಕೆಲಗಳ  ಪಕ್ಕದಲ್ಲೇ  ಅಳವಡಿಸಲಾಗಿದೆ. ಅದನ್ನು ಆದಷ್ಟು  ರಸ್ತೆಯಿಂದ ದೂರದಲ್ಲಿ ಅಳವಡಿಸಬೇಕೆಂದು ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.

ಗ್ಯಾರಂಟಿ ಸಮಿತಿ ಸದಸ್ಯ ಸಂತೋಷ್ ಭಂಡಾರಿ ಮಾತನಾಡಿ, ಸಾಮಾಜಿಕ ಅರಣ್ಯ ಇಲಾಖೆಯಿಂದ ರಸ್ತೆ ಬದಿ ನೆಡುತೋಪು ರಚನೆಯ ಹೆಸರಿನಲ್ಲಿ ಕರೆಂಟ್ ಕಂಬಗಳ ಅಡಿಯಲ್ಲೇ ಗಿಡ‌ ನೆಡುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದು ಎಂದು ಸಭೆಗೆ ತಿಳಿಸಿದರು.

ಅಧ್ಯಕ್ಷರು ಈ ಬಗ್ಗೆ ಮೆಸ್ಕಾಂ ಇಲಾಖೆಯವರು ಸ್ಥಳ ಸಮಿತಿ ಶಾಖಾ ಮಟ್ಟದಲ್ಲಿ ಸಭೆ ನಡೆಸುವಂತೆ ಸೂಚಿಸಿದರು.

ಅನ್ನ ಭಾಗ್ಯ ಯೋಜನೆ ಸಂಬಂಧಿಸಿದಂತೆ ಪಡಿತರ ವಿತರಣೆ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಇದ್ದವರಿಗೆ ಆದ್ಯತೆಯಲ್ಲಿ ಪಡಿತರ ನೀಡುವ ವ್ಯವಸ್ಥೆಯಾಗಬೇಕು ಎಂದು ಅಧ್ಯಕ್ಷರು ಸೂಚಿಸಿದರು.

ಯುವ ನಿಧಿ ಯೋಜನೆಗೆ ಸಂಬಂಧಿಸಿದಂತೆ ಅ.08 ರಂದು ಯುವನಿಧಿ ನೋಂದಣಿ ಶಿಬಿರ ಹಮ್ಮಿಕೊಳ್ಳುವಂತೆ ಅಧ್ಯಕ್ಷರು ಸೂಚಿಸಿದರು.

ಶಕ್ತಿ ಯೋಜನೆಯಡಿ ಮುಂಡೂರು – ತಿಂಗಳಾಡಿಗೆ ತೆರಳುವ ಬಸ್ ಸಮಯಕ್ಕೆ ಸರಿಯಾಗಿ ಬಾರದೆ ಇರುವುದರಿಂದ ಸರಿಯಾದ ಸಮಯಕ್ಕೆ ಬರುವಂತಾಗಬೇಕೆಂದು ಅಧ್ಯಕ್ಷರು ಇಲಾಖಾಧಿಕಾರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರಾದ ತಾರಾನಾಥ ನುಳಿಯಾಲು, ಬಬಿತಾ, ವಿಜಯಲಕ್ಷ್ಮಿ ಎಡ್ವರ್ಡ್ ಮೈಕಲ್ ಡಿಸೋಜಾ, ಅಬ್ಬು ನವಗ್ರಾಮ, ಕೆಎಸ್ ಆರ್ ಟಿಸಿ ಡಿಪೊ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಕಾಶ, ಮೆಸ್ಕಾಂ ಗ್ರಾಮಾಂತರ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶಿವಶಂಕರ, ಆಹಾರ ಶಿರಸ್ತೇದಾರರಾದ ಸರಸ್ವತಿ, ಸಹಾಯಕ ಸಿಡಿಪಿಓ ಮಂಗಲ, ಮೇಲ್ವಿಚಾರಕಿ ನಾಗರತ್ನ, ಉದ್ಯೋಗ ವಿನಿಮಯ ಕೇಂದ್ರದ ದಯಾನಂದ, ವಿಷಯ ನಿರ್ವಾಹಕರಾದ ತುಳಸಿ, ಜಯಪ್ರಸಾದ್, ಅಶ್ವಿನಿ ಉಪಸ್ಥಿತರಿದ್ದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿ, ವಂದಿಸಿದರು.

error: Content is protected !!
Scroll to Top