ಕಾಠ್ಮಂಡು: ನೇಪಾಳದ ಕಾಠ್ಮಂಡುವಿನಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಪ್ರತಿಭಟನೆಯ ಹಿಂಸಾಚಾರ ಭುಗಿಲೆದ್ದಿದ್ದು, ಇದರ ನಡುವೆಯೇ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ.
ಓಲಿ ದೇಶ ಬಿಟ್ಟು ಪಲಾಯನ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಎರಡನೇಯ ದಿನವೂ ಪ್ರತಿಭಟನೆ ಮುಂದುವರಿದಿದ್ದು ಸೋಮವಾರ 2 0 ಜನರು ಸಾವನ್ನಪ್ಪಿದ್ದು, 250 ಕ್ಕೂ ಹೆಚ್ಚು ಜನರು ಗಾಯಗೊಂಡ ನಂತರ ಪ್ರತಿಭಟನಾಕಾರರು ಓಲಿ ಅವರನ್ನು ಪದಚ್ಯುಿತಗೊಳಿಸುವಂತೆ ಮತ್ತು ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಡ ಹೇರಿದ್ದರು.
ಸೇನಾ ಮೂಲಗಳ ಪ್ರಕಾರ, ಓಲಿ ಅವರು ನೇಪಾಳ ಸೇನಾ ಮುಖ್ಯ ಸ್ಥ ಜನರಲ್ ಅಶೋಕ್ ರಾಜ್ ಸಿಗ್ಡಲ್ ಅವರೊಂದಿಗೆ ಮಾತನಾಡಿದ್ದು, ಹದಗೆಡುತ್ತಿರುವ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಪ್ರಧಾನಿ ನಿವಾಸದಿಂದ ಸುರಕ್ಷಿತವಾಗಿ ಹೊರಬರುವುದನ್ನು ಖಚಿತ ಪಡಿಸಿಕೊಳ್ಳಲು ಮಿಲಿಟರಿ ಸಹಾಯವನ್ನು ಕೋರಿದ್ದರು. ಸೇನಾ ಮುಖ್ಯಸ್ಥರು ಓಲಿ ಅವರನ್ನು ಹುದ್ದೆಯಿಂದ ಕೆಳಗಿಳಿಯುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ, ಅವರು ಅಧಿಕಾರವನ್ನು ತ್ಯಜಿಸಿದರೆ ಮಾತ್ರ ಮಿಲಿಟರಿ ಪರಿಸ್ಥಿತಿಯನ್ನು ಸ್ಥಿರಗೊಳಿಸಬಹುದು ಎಂದು ಹೇಳಿದರು.
ಎರಡನೇ ದಿನವಾದ ಮಂಗಳವಾರವೂ ಪ್ರತಿಭಟನಾಕಾರರು ಬೀದಿಗಿಳಿದು ಕಮ್ಯೂನಿಸ್ಟ್ (ಮಾರ್ಕಿಸ್ಟ್ & ಲೆನಿನಿಸ್ಟ್) ಮತ್ತು ಕಾಂಗ್ರೆಸ್ ಮೈತ್ರಿಕೂಟ ಆಡಳಿತದ ಪ್ರಧಾನಿ ಕೆ.ಪಿ. ಓಲಿ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಲ್ಲುತೂರಾಟ ನಡೆಸಿದ್ದರು. ಮುಂಜಾಗ್ರತಾ ಕ್ರಮವಾಗಿ ರಾಜಧಾನಿ ಕಾಠ್ಮಂಡು ಸೇರಿದಂತೆ ಹಲವೆಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಉದ್ರಿಕ್ತ ಪ್ರತಿಭಟನಾಕಾರರು ನೇಪಾಳ ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಅವರ ನಿವಾಸಕ್ಕೆ ಬೆಂಕಿ ಹಚ್ಚಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರತಿಭಟನಾಕಾರರು ಅಧ್ಯಕ್ಷರ ನಿವಾಸದ ಪರಿಸರದಲ್ಲಿ ಮುತ್ತಿಗೆ ಹಾಕಿ ನಿವಾಸವನ್ನು ಹಾನಿಗೊಳಿಸುತ್ತಿರುವ ದೃಶ್ಯ ಸೆರೆಯಾಗಿದೆ.
























