ಪುತ್ತೂರು: ಅಂತರಾಷ್ಟ್ರೀಯ ತರಬೇತಿ ಸಂಸ್ಥೆ ಜೆಸಿಐ ಪುತ್ತೂರು ಘಟಕದ ವತಿಯಿಂದ ಜೆಸಿ ಸಪ್ತಾಹ 2025 ಸೆ.9 ರಿಂದ 15ರ ವರೆಗೆ ನಡೆಯಲಿದ್ದು, ಸಪ್ತಾಹಕ್ಕೆ ಮಂಗಳವಾರ ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಗಿದೆ ಎಂದು ಪುತ್ತೂರು ಜೆಸಿಐ ಅಧ್ಯಕ್ಷ ಭಾಗ್ಯೇಶ್ ರೈ ಹೇಳಿದ್ದಾರೆ.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಪ್ತಾಃಧ ಎರಡನೇ ದಿನ ಸೆ.10 ರಂದು ವೆಬ್ ಪೀಪಲ್ ಸಂಸ್ಥೆ ಪುತ್ತೂರು ಇಲ್ಲಿ ಜೆಸಿಯೇತರ ಯುವ ಸಮುದಾಯಕ್ಕೆ ಜೆಸಿ ಸೇರಲು ಮಾಹಿತಿ ಕಾರ್ಯಾಗಾರ ಹಾಗೂ ಮಧ್ಯಾಹ್ನದ ನಂತರ ಸರಕಾರಿ ಪ್ರಥಮ ದರ್ಜೆ ಕಾಲೇಜು ಜಿಡೆಕಲ್ಲು ಪುತ್ತೂರು ಇಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ “ಉದ್ಯೋಗ ಕೌಶಲ್ಯ ತರಬೇತಿ’ಯು ನಡೆಯಲಿದೆ ಎಂದರು.
ಮೂರನೇ ದಿನ ಸೆ.11 ಗುರುವಾರ ವಿದ್ಯಾಮಾತಾ ಅಕಾಡೆಮಿ ಇಲ್ಲಿ ಅಖಿಲ ಭಾರತೀಯ ಮೊಬೈಲ್ ಮಾರಾಟಗಾರರ ಸಂಘದ ಪುತ್ತೂರು ಘಟಕದ ಸಹಯೋಗದಲ್ಲಿ “ಆರೋಗ್ಯ ತಪಾಸಣಾ ಶಿಬಿರ’ವು ನಡೆಯಲಿದೆ ಹಾಗೂ ಮಧ್ಯಾಹ್ನದ ನಂತರ ತಾಲೂಕು ಕ್ರೀಡಾಂಗಣ ಕೊಂಬೆಟ್ಟು ಪುತ್ತೂರು ಇಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟವು ನಡೆಯಲಿದೆ ಎಂದರು.
ನಾಲ್ಕನೇ ದಿನವಾದ ಸೆ.12 ಶುಕ್ರವಾರ ಸಚ್ಚಿದಾನಂದ ಸಭಾಭವನ ದರ್ಬೆ ಪುತ್ತೂರು ಇಲ್ಲಿ ವ್ಯವಹಾರ ನೆಟ್ವರ್ಕಿಂಗ್ ಸಭೆ ನಡೆದು ಬಳಿಕ ಲಷ್ ಫ್ಯಾಷನ್ ಇನೈಡ್ ಜಿ.ಎಲ್. ಒನ್ ಮಾಲ್ ಪುತ್ತೂರು ಇಲ್ಲಿ ನಾಮಫಲಕದೊಂದಿಗೆ ವ್ಯವಹಾರ ದಿನ ಕಾರ್ಯಕ್ರಮವು ನಡೆಯಲಿದೆ ಎಂದರು.
ಐದನೇ ದಿನವಾದ ಸೆ.13 ಶನಿವಾರ ಸುದಾನ ಪದವಿ ಪೂರ್ವ ಕಾಲೇಜಿನಲ್ಲಿ ಕರ್ತವ್ಯಕ್ಕಾಗಿ ಧ್ವನಿ-ಮಾನವ ಕರ್ತವ್ಯ ಮತ್ತು ಮನವಿ ದಿನ ಕಾರ್ಯಕ್ರಮವು ನಡೆಯಲಿದೆ.
ಆರನೇ ದಿನ ಸೆ.14 ಭಾನುವಾರ ವಿದ್ಯಾಮಾತಾ ಅಕಾಡೆಮಿಯಿಂದ ಬೋಳ್ತಾರ್ ಪುತ್ತೂರು ವರೆಗೆ ಆಮಂತ್ರಣ ದಿನ ಬನ್ನಿ ಜೆಸಿಐ ಸೇರಿ ನಡಿಗೆ ಜಾಥಾ ನಡೆಯಲಿದೆ. ವಿದ್ಯಮಾತಾ ಅಕಾಡೆಮಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪುದ್ವಾರ್ ತುಳುನಾಡಿನ ಅಪ್ಪಟ ಸಾಂಪ್ರದಾಯಿಕ ಖಾದ್ಯಗಳ ಭೋಜನದೊಂದಿಗೆ ಸಪ್ತಾಹವು ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಿಕಟಪೂರ್ವ ಅಧ್ಯಕ್ಷ ಮೋಹನ್ ಕೆ., ಕಾರ್ಯದರ್ಶಿ ಮನೋಹರ್ ಪಾಟಾಳಿ, ಜೇಸಿ ಮಹಿಳಾ ಸಂಯೋಜಕಿ ಆಶಾ ಮುತ್ಲಾಜೆ, ಸಪ್ತಾಹ ನಿರ್ದೇಶಕ ರುಕ್ಮಯ ಉಪಸ್ಥಿತರಿದ್ದರು.
























