ಮಹಿಳೆಯ ಬ್ಯಾಗಿನಿಂದ 4.5 ಲ.ರೂ. ಮೌಲ್ಯದ ನೆಕ್ಲೆಸ್ ಎಗರಿಸಿದ್ದ ಆರೋಪಿಗಳು
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಚೆಕ್-ಇನ್ ಲಗೇಜ್‌ನಿಂದ ಚಿನ್ನಾಭರಣಗಳನ್ನು ಕದ್ದ ಆರೋಪದ ಮೇಲೆ ಏರ್ ಇಂಡಿಯಾ SATSನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಬ್ಯಾಗೇಜ್ ನಿರ್ವಹಣಾ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಕಳವು ಮಾಲನ್ನು ಖರೀದಿಸಿದ ಆರೋಪ ಹೊತ್ತಿರುವ ಐದನೇ ವ್ಯಕ್ತಿಯನ್ನು ಸಹ ಬಂಧಿಸಲಾಗಿದೆ.
ಕಾಣೆಯಾದ ಚಿನ್ನದ ಗಣನೀಯ ಭಾಗವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಆಗಸ್ಟ್ 30ರಂದು ಬೆಳಗ್ಗೆ ಬೆಂಗಳೂರಿನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದ ಮಹಿಳಾ ಪ್ರಯಾಣಿಕರೊಬ್ಬರು ಬ್ಯಾಗೆಜ್ ಬೆಲ್ಟ್‌ನಿಂದ ತಮ್ಮ ಲಗೇಜ್ ಹೊರತೆಗೆದಾಗ 4.5 ಲಕ್ಷ ರೂ. ಮೌಲ್ಯದ 56 ಗ್ರಾಂ ಚಿನ್ನಾಭರಣ ಕಾಣೆಯಾಗಿರುವುದು ಬೆಳಕಿಗೆ ಬಂದಿತ್ತು. ತಕ್ಷಣ ಅವರು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆರೋಪಿಗಳನ್ನು ಮಂಗಳೂರು ತಾಲೂಕು ಕಂದಾವರದ ನಿವಾಸಿ ನಿತಿನ್, ಮೂಡುಪೆರಾರದ ನಿವಾಸಿ ಸದಾನಂದ ಮತ್ತು ಬಜಪೆ ನಿವಾಸಿ ರಾಜೇಶ್ ಹಾಗೂ ಪ್ರವೀಣ್ ಫೆರ್ನಾಂಡಿಸ್ ಎಂದು ಗುರುತಿಸಲಾಗಿದೆ. ಕದ್ದ ಆಭರಣವನ್ನು ಮೂಡುಪೆರಾರದ ರವಿರಾಜ್ ಎಂಬ ವ್ಯಕ್ತಿಗೆ ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಕದ್ದ ಸೊತ್ತನ್ನು ಪಡೆದಿದ್ದಕ್ಕಾಗಿ ರವಿರಾಜ್‌ನನ್ನು ನಂತರ ಬಂಧಿಸಲಾಯಿತು. ಕದ್ದ ಆಭರಣಗಳಲ್ಲಿ ಸುಮಾರು 50 ಗ್ರಾಂಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಳೆದ ಜನವರಿಯಲ್ಲಿ ಈ ಆರೋಪಿಗಳು ಮನೋಹರ್ ಶೆಟ್ಟಿ ಎಂಬ ಪ್ರಯಾಣಿಕನ ಲಗೇಜ್‌ನಿಂದ 2 ಲಕ್ಷ ರೂ. ನಗದನ್ನು ಕದ್ದಿರುವುದು ಈಗ ಬೆಳಕಿಗೆ ಬಂದಿದೆ. ಎಲ್ಲ ಆರೋಪಿಗಳು ಸುಮಾರು ಒಂಬತ್ತು ವರ್ಷಗಳಿಂದ ಏರ್ ಇಂಡಿಯಾ SATSನಲ್ಲಿ ಕೆಲಸ ಮಾಡುತ್ತಿದ್ದಾರೆ.
























