ಮತ ಕಳ್ಳತನ ಆರೋಪ ಮಾಡಿದ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾದ ಪ್ರಕರಣ
ನವದೆಹಲಿ: ಬಿಜೆಪಿ ಮತಗಳ್ಳತನ ಮಾಡುತ್ತಿದೆ ಎಂದು ದೇಶಾದ್ಯಂತ ಗುಲ್ಲೆಬ್ಬಿಸುತ್ತಿರುವ ಕಾಂಗ್ರೆಸ್‌ಗೆ ಈ ಆರೋಪ ತಿರುಗುಬಾಣವಾಗಿ ಪರಿಣಮಿಸಿದೆ. ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಮತ್ತು ರಾಹುಲ್ ಗಾಂಧಿಯ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪವನ್ ಖೇರಾ ಅವರೇ ಎರಡೆರಡು ವೋಟರ್ ಐಡಿ ಹೊಂದಿರುವುದು ಬಯಲಾಗಿದ್ದು, ಈ ಕುರಿತು ಚುನಾವಣಾ ಆಯೋಗ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಮತ ಕಳ್ಳತನ ಎಸಗುತ್ತಿರುವ ಬಿಜೆಪಿ ಮೇಲೆ ಹೈಡ್ರೋಜನ್ ಬಾಂಬ್ ಹಾಕಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ ಮರುದಿನವೇ ಬಿಜೆಪಿ ಪವನ್ ಖೇರಾ ಎರಡು ಉತದಾರರ ಗುರುತಿನ ಚೀಟಿ ಹೊಂದಿರುವುದನ್ನು ಬಯಲು ಮಾಡಿದೆ. ಪವನ್ ಖೇರಾ ಎರಡು ಕಡೆ ವೋಟರ್ ಐಡಿ ಹೊಂದಿದ್ದಾರೆ ಎಂದು ಆರೋಪಿಸಿ ಬಿಜೆಪಿ ದಾಖಲೆ ಬಿಡುಗಡೆ ಮಾಡಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ದೂರಿನ ಬೆನ್ನಲ್ಲೇ ಪವನ್ ಖೇರಾಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿ ಶಾಕ್ ನೀಡಿದೆ.
ದೆಹಲಿಯಲ್ಲಿ ಎರಡು ಕಡೆ ವೋಟರ್ ಐಡಿ ಹೊಂದಿರುವುದಕ್ಕೆ ಚುನಾವಣಾ ಆಯೋಗ ಖೇರಾಗೆ ನೋಟಿಸ್ ನೀಡಿದೆ. ಎರಡು ಕಡೆ ವೋಟರ್ ಐಡಿ ಹೊಂದಿರುವುದು 1950ರ ಜನಪ್ರತಿನಿಧಿ ಕಾಯ್ದೆಯ ಅಡಿ ಶಿಕ್ಷಾರ್ಹ ಅಪರಾಧ. ಈ ಸಂಬಂಧ ಸೆಪ್ಟೆಂಬರ್ 8ರ ಬೆಳಗ್ಗೆ 11 ಗಂಟೆಯೊಳಗೆ ನೋಟಿಸ್‌ಗೆ ಉತ್ತರಿಸಬೇಕು ಮತ್ತು ಕಾಯ್ದೆಯಡಿ ನಿಮ್ಮ ವಿರುದ್ಧ ಕ್ರಮ ಯಾಕೆ ಕೈಗೊಳ್ಳಬಾರದು ಎಂಬುದನ್ನು ತಿಳಿಸಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ನವದೆಹಲಿ ಮತ್ತು ಜಂಗ್ಪುರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಪವನ್ ಖೇರಾ ಹೆಸರಿದೆ ಎಂದು ಬಿಜೆಪಿ ದಾಖಲೆಯನ್ನು ತೋರಿಸಿ ಗಂಭೀರ ಆರೋಪ ಮಾಡಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್‌ನಲ್ಲಿ ಪವನ್ ಖೇರಾ ಎರಡು ವೋಟರ್ ಐಡಿ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಪವನ್ ಖೇರಾ ಎರಡು ಸಕ್ರಿಯ EPIC ಸಂಖ್ಯೆಗಳನ್ನು ಹೇಗೆ ಹೊಂದಿದ್ದಾರೆ? ಅವರು ಹಲವು ಬಾರಿ ಮತ ಚಲಾಯಿಸಿದ್ದಾರೆಯೇ ಎಂಬುದನ್ನು ತನಿಖೆ ಮಾಡುವುದು ಈಗ ಚುನಾವಣಾ ಆಯೋಗದ ಜವಾಬ್ದಾರಿ. ಇದು ಚುನಾವಣಾ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ.
ಶಿಫ್ಟ್ ಆಗಿದ್ದರೂ ಹೆಸರು ತೆಗೆದು ಹಾಕಿಲ್ಲ
ನೋಟಿಸ್‌ಗೆ ಪ್ರತಿಕ್ರಿಯಿಸಿರುವ ಪವನ್ ಖೇರಾ, ಚುನಾವಣಾ ಆಯೋಗ ಬಿಜೆಪಿಯ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ. ನಾನು ನವದೆಹಲಿ ಕ್ಷೇತ್ರದಿಂದ 2016ರಲ್ಲೇ ಶಿಫ್ಟ್ ಆಗಿದ್ದೇನೆ. ಅಲ್ಲಿಂದ ನನ್ನ ಹೆಸರು ಡಿಲೀಟ್ ಮಾಡಲು ಅರ್ಜಿಯನ್ನೂ ಸಲ್ಲಿಸಿದ್ದೇನೆ. ಆದರೂ ಚುನಾವಣಾ ಆಯೋಗ ಎರಡೂ ಕಡೆಗಳಲ್ಲಿ ನನ್ನ ಹೆಸರನ್ನು ಇರಿಸಿಕೊಂಡಿದೆ. ನಾನು ಎರಡೂ ಕಡೆ ಮತ ಚಲಾಯಿಸಿದ್ದೇನೆ ಎಂಬುದಕ್ಕೆ ಸಿಸಿಟಿವಿ ದಾಖಲೆ ನೀಡಲಿ. ಚುನಾವಣಾ ಆಯೋಗ ಮಾಡಿದ ತಪ್ಪನ್ನು ನನ್ನ ಮೇಲೆ ಹಾಕಲಾಗುತ್ತಿದೆ. ವೋಟ್ ಚೋರಿಗೆ ಮತ್ತೊಂದು ಸಾಕ್ಷಿ ಸಿಕ್ಕಂತಾಗಿದೆ ಎಂದಿದ್ದಾರೆ.
ಇದೇ ರೀತಿ ಚುನಾವಣಾ ಆಯೋಗ ಹಲವು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಒಂದೇ ಹೆಸರನ್ನಿಟ್ಟಿದೆ. ಆ ಮೂಲಕ ಮತ ಕಳ್ಳತನ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಸಾಕ್ಷಿ ಸಮೇತ ಸಾಬೀತುಪಡಿಸಿದ್ದರು. ಆದರೆ, ಆ ಬಗ್ಗೆ ಆಯೋಗ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅವರೆಲ್ಲರೂ ಎರಡು ಕಡೆ ಹೆಸರಿದ್ದರೂ ಒಂದೇ ಕಡೆ ಮತ ಚಲಾವಣೆ ಮಾಡಿದ್ದಾರೆ ಎಂದು ಬಿಜೆಪಿ ಘೋಷಿಸಿತ್ತು. ಅದೇ ರೀತಿ ನಾನು ಕೂಡ ನವದೆಹಲಿಯಿಂದ 2016ರಲ್ಲೇ ಶಿಫ್ಟ್ ಆಗಿದ್ದೇನೆ. ಹಾಗಿದ್ದರೆ ದೆಹಲಿ ಕ್ಷೇತ್ರದಲ್ಲಿ ನನ್ನ ಹೆಸರಿನಲ್ಲಿ ಯಾರು, ಯಾರಿಗೆ ಮತ ಹಾಕುತ್ತಿದ್ದಾರೆ ಎಂಬುದನ್ನು ತಿಳಿಯಲು ಸಿಸಿಟಿವಿ ವಿಡಿಯೋ ನೀಡಬೇಕು ಎಂದಿದ್ದಾರೆ.
ಮತದಾರರ ವಂಚನೆಯ ಕುರಿತು ಕಾಂಗ್ರೆಸ್‌ನಿಂದ ಬಂದ ದೂರುಗಳನ್ನು ನಿರ್ಲಕ್ಷಿಸಲಾಗಿದ್ದರೂ, ಚುನಾವಣಾ ಆಯೋಗ ವಿರೋಧ ಪಕ್ಷದ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಬಹಳ ಆಸಕ್ತಿ ತೋರುತ್ತಿದೆ. ಕರ್ನಾಟಕದ ಮಹಾದೇವಪುರ ಕ್ಷೇತ್ರದಲ್ಲಿ 1,00,000 ನಕಲಿ ಮತದಾರರು ಪತ್ತೆಯಾಗಿದ್ದಾರೆ ಎಂಬ ಆರೋಪದ ಬಗ್ಗೆ ಯಾಕೆ ಯಾವುದೇ ನೋಟಿಸ್ ನೀಡಿಲ್ಲ? ಈಗ ನನಗೆ ಮಾತ್ರ ನೋಟಿಸ್ ನೀಡಿದ್ದೇಕೆ? ಎಂದು ಪವನ್ ಖೇರಾ ಪ್ರಶ್ನಿಸಿದ್ದಾರೆ.

























