ಚಿಕ್ಕಮಗಳೂರು: ಕರ್ನಾಟಕದಲ್ಲಿ ಮತಗಳ್ಳತನವಾಗಿದೆ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದು, ಕಾಂಗ್ರೆಸ್ ನಾಯಕರು ಪ್ರತಿಭಟನೆಗೆ ಸಜ್ಜಾಗಿದ್ದು ಇದಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸುಳ್ಳರು, ಕಳ್ಳರು ಹೆಚ್ಚು ಸದ್ದು ಮಾಡುತ್ತಾರೆ. ರಾಹುಲ್ ಗಾಂಧಿ ಒಬ್ಬ ಮಿಸ್‌ಗೈಡೆಡ್ ಲೀಡರ್ ಎಂದು ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿಯ ರಿಮೋಟ್ ಕಂಟ್ರೋಲರ್ ಎಲ್ಲೋ ಇದೆ. ಅವರು ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ಅಕ್ರಮ ಎಂಬ ಆರೋಪವೇ ಸುಳ್ಳು. ಅವರ ಬಳಿ ಸಾಕ್ಷಿಗಳಿದ್ದರೆ ನೀಡಬೇಕು. ಆದರೆ ಅವರು ಆಧಾರಗಳನ್ನು ನೀಡದೆ ಇಲ್ಲಿಯ ವರೆಗೆ ಕೇವಲ ಆರೋಪಗಳನ್ನೇ ಮಾಡುತ್ತಾ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಮತಗಳ್ಳತನ ಎಂಬುದೇ ಕಾಂಗ್ರೆಸಿಗರ ನಾಟಕ. ಅವರು ಈ ವಿಷಯದಲ್ಲಿ ಬೀದಿಯಲ್ಲಿ ದೊಂಬರಾಟ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
























