ಕುಂದಾಪುರ: ಗಂಗೊಳ್ಳಿ ಸೇತುವೆ ಮತ್ತು ಶಿರೂರು ಅಳಿವೆಗದ್ದೆಯಲ್ಲಿ ಸರ್ವಋತು ಬಂದರುಗಳನ್ನು ನಿರ್ಮಾಣ ಮಾಡಲು ಸಂಸದ ಬಿ. ವೈ. ರಾಘವೇಂದ್ರ ಅವರು ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮತ್ಸೋದ್ಯಮ, ವ್ಯಾಪಾರ, ಜೀವನೋಪಾಯ ಮತ್ತು ಕರಾವಳಿಯ ವಾಣಿಜ್ಯ ವ್ಯವಹಾರಕ್ಕೆ ಗಂಗೊಳ್ಳಿ ಬಂದರು ಪ್ರಮುಖ ಸ್ಥಳವಾಗಿದೆ. ಇದು ರಾಜ್ಯದ ಎರಡನೇ ಅತೀ ದೊಡ್ಡ ಮೀನುಗಾರಿಕಾ ಬಂದರು ನೆಲೆಯಾಗಿದ್ದು, ಇಲ್ಲಿ 200 ಕ್ಕೂ ಅಧಿಕ ಮೀನುಗಾರಿಕಾ ದೋಣಿಗಳಿವೆ. ಗಂಗೊಳ್ಳಿಯಿಂದ ಕುಂದಾಪುರ ಕೂಗಳತೆಯ ದೂರದಲ್ಲಿದ್ದರೂ ಇಲ್ಲಿನ ಜನರು ಅಲ್ಲಿಗೆ ತಲುಪಬೇಕಾದರೆ 17 ರಿಂದ 18 ಕಿ.ಮೀ. ಹಾದಿ ಕ್ರಮಿಸಬೇಕಾಗುತ್ತದೆ. ಇದು ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಗಂಗೊಳ್ಳಿ ಸೇತುವೆಯಾದಲ್ಲಿ ನಿತ್ಯ ಪ್ರಯಾಣಿಕರಿಗೆ ಸಂಚಾರಕ್ಕೆ ಅನುಕೂಲವಾಗುತ್ತದೆ. ಹಾಗೆಯೇ ಬೈಂದೂರು ಶಿರೂರು ಅಳಿವೆಗದ್ದೆ ಬಂದರಿಗೆ ಮೂಲಸೌಕರ್ಯ ಒದಗಿಸುವುದರಿಂದ ಮೀನುಗಾರರ ಜೀವನೋಪಾಯ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
























