ಟ್ರಂಪ್ ಡಬ್ಬಲ್ ಸುಂಕದಿಂದ ಚಿನ್ನದ ಮಾರುಕಟ್ಟೆಯಲ್ಲಿ ಬಿರುಗಾಳಿ
ನವದೆಹಲಿ: ಭಾರತೀಯ ಆಮದುಗಳ ಮೇಲೆ ಟ್ರಂಪ್ ಹೆಚ್ಚುವರಿ ಶೇ.25 ಸುಂಕ ವಿಧಿಸಿದ ಪರಿಣಾಮ ಚಿನ್ನದ ಬೆಲೆ ಭಾರಿ ಏರಿಕೆ ಕಂಡಿದೆ.
ಭಾರತದ ಮೇಲೆ ಟ್ರಂಪ್ ಸುಂಕ ಘೋಷಿಸಿದ ಹಿನ್ನೆಲೆ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಚಿನ್ನದ ಬೆಲೆ 3,600 ರೂ. ಏರಿಕೆಯಾಗಿದ್ದು, 10 ಗ್ರಾಂಗೆ 1,02,620 ರೂ.ಗೆ ತಲುಪಿ ದಾಖಲೆ ಮಾಡಿದೆ.
ಅಖಿಲ ಭಾರತ ಸರಾಫ ಸಂಘದ ಪ್ರಕಾರ ಶೇ.99.9 ಶುದ್ಧತೆಯ ಚಿನ್ನ ಬುಧವಾರ 10 ಗ್ರಾಂಗೆ 99,020 ರೂ.ಗೆ ತಲುಪಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಶೇ.99.5 ರಷ್ಟು ಶುದ್ಧತೆಯ ಚಿನ್ನದ ಬೆಲೆ 3,600 ರುಪಾಯಿ ಏರಿಕೆಯಾಗಿ 10 ಗ್ರಾಂಗೆ (ಎಲ್ಲಾ ತೆರಿಗೆಗಳು ಸೇರಿದಂತೆ) 1,02,200 ರೂ. ಗರಿಷ್ಠ ಮಟ್ಟವನ್ನು ತಲುಪಿದೆ.
ಆ.1ರಿಂದಲೇ ಜಾರಿಗೆ ಬರುವಂತೆ ಭಾರತದ ಆಮದುಗಳ ಮೇಲೆ ಅಮೆರಿಕ ಶೇ.25ರಷ್ಟು ಸುಂಕ ವಿಧಿಸಿತ್ತು. ರಷ್ಯಾ ಜೊತೆಗಿನ ಒಪ್ಪಂದ ಕೊನೆಗಾಣಿಸದಿದ್ದಕ್ಕೆ ಹೆಚ್ಚುವರಿಯಾಗಿ ಶೇ.25 ಸುಂಕವನ್ನು ಭಾರತದ ಮೇಲೆ ವಿಧಿಸಿದೆ. ಆ ಮೂಲಕ ಶೇ.50 ಸುಂಕವನ್ನು ಅಮೆರಿಕ ಹಾಕಿದೆ. ಇದು ಎರಡು ದೇಶಗಳ ನಡುವಿನ ವ್ಯಾಪಾರ ಉದ್ವಿಗ್ನತೆಯನ್ನು ತೀವ್ರಗೊಳಿಸಿದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ತಿಳಿಸಿದ್ದಾರೆ. ಗುರುವಾರ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,500 ರೂ. ಏರಿಕೆಯಾಗಿ 1,14,000 ರೂ.ಗೆ ತಲುಪಿದೆ.
























