ಯೂಟ್ಯೂಬ್ ನೋಡಿ ಸಾಯಿಸುವ ಖತರ್ನಾಕ್ ಐಡಿಯಾ ಕಂಡುಕೊಂಡಿದ್ದ ಹೆಂಡತಿ
ಹೈದರಾಬಾದ್: ಆಹಾರದಲ್ಲಿ ವಿಷಬೆರೆಸಿ ಸಾಯಿಸುವುದು ಸಾಮಾನ್ಯ ವಿಚಾರ. ಆದರೆ ತೆಲಂಗಾಣದ ಮಹಿಳೆಯೊಬ್ಬಳು ಗಂಡನನ್ನು ಸಾಯಿಸಲು ಬೇರೆಯೇ ಆದ ವಿಧಾನ ಅನುಸರಿಸಿದ್ದಾಳೆ. ಈಕೆ ಕಿವಿಗೆ ವಿಷ ಸುರಿದು ಗಂಡನನ್ನು ಸಾಯಿಸಿದ್ದಾಳೆ. ಈಕೆಗೆ ಈ ಖತರ್ನಾಕ್ ಐಡಿಯಾ ಸಿಕ್ಕಿದ್ದು ಯೂಟ್ಯೂಬ್ನಲ್ಲಂತೆ.
ಮಹಿಳೆ ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾಳೆ. ಈ ಕೊಲೆಗೆ ಎಷ್ಟು ಚೆನ್ನಾಗಿ ಸಂಚು ರೂಪಿಸಲಾಗಿತ್ತೆಂದರೆ ಮೊದಲು ಪೊಲೀಸರಿಗೆ ಕೂಡ ಈ ರೀತಿ ಸಾಯಿಸಲು ಸಾಧ್ಯ ಎಂಬ ನಂಬಿಕೆ ಮೂಡಿರಲಿಲ್ಲ. ಯಾರಿಗೂ ಅನುಮಾನ ಬರಬಾರದು, ಗಂಡನ ದೇಹದಲ್ಲಿ ವಿಷದ ಅಂಶ ಸಿಗಬಾರದು ಎಂದು ಆಕೆ ಆತನ ಕಿವಿಗೆ ವಿಷ ಸುರಿದು ಕೊಲೆ ಮಾಡಿದ್ದಳು. ಕೊಲೆ ಮಾಡುವ ಹೊಸ ವಿಧಾನದ ಬಗ್ಗೆ ಆಕೆ ಯೂಟ್ಯೂಬ್ನಲ್ಲಿ ಬಹಳಷ್ಟು ಸರ್ಚ್ ಮಾಡಿದ್ದಾಳಂತೆ. ಮೃತನನ್ನು ಸಂಪತ್ ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಪತ್ ಗ್ರಂಥಾಲಯದಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ಮದ್ಯಪಾನದ ವ್ಯಸನಿಯಾಗಿದ್ದ ಈತ ಕುಡಿದು ಪತ್ನಿ ರಮಾದೇವಿಯೊಂದಿಗೆ ಜಗಳವಾಡುತ್ತಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ತಿಂಡಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಮಾದೇವಿ ಅದೇ ಹಣದಿಂದ ಮಕ್ಕಳನ್ನು ಸಾಕುತ್ತಿದ್ದಳು. ಆಕೆ ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ರಮಾದೇವಿಗೆ 50 ವರ್ಷದ ಕರಣ್ ರಾಜಯ್ಯ ಎಂಬಾತನ ಪರಿಚಯವಾಗಿ ಅಕ್ರಮ ಸಂಬಂಧ ಬೆಳೆದಿತ್ತು.
ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಸಾಯಿಸಬೇಕೆಂದು ಇಬ್ಬರು ತೀರ್ಮಾನಿಸಿದ್ದರು. ಅದರಂತೆ ಯೂಟ್ಯೂಬ್ನಲ್ಲಿ ಸರ್ಚ್ ಮಾಡಿ ಐಡಿಯಾ ಹುಡುಕಿದ್ದು, ಕೀಟನಾಶಕವನ್ನು ಪ್ರಿಯಕರ ತಂದುಕೊಟ್ಟಿದ್ದ. ಸಂಪತ್ ಕುಡಿದು ಟೈಟಾಗಿ ನಿದ್ರಿಸುತ್ತಿದ್ದಾಗ ರಮಾದೇವಿ ಪ್ರಿಯಕರ ರಾಜಯ್ಯನೊಂದಿಗೆ ಸೇರಿ ಕಿವಿಗೆ ಕೀಟನಾಶಕ ಸುರಿದಿದ್ದಳು. ಇದರಿಂದ ಸಂಪತ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ನಂತರ ಇನ್ನೊಬ್ಬನ ಸಹಾಯದಿಂದ ಅವರು ಶವವನ್ನು ದೂರ ಸಾಗಿಸಿ ಎಸೆದಿದ್ದರು. ಮರುದಿನ ರಮಾದೇವಿ ತನ್ನ ಗಂಡನ ಬಗ್ಗೆ ಪೊಲೀಸ್ ಠಾಣೆಯಲ್ಲಿ ನಾಪತ್ತೆಯ ದೂರು ದಾಖಲಿಸಿದಳು. ಆಗಸ್ಟ್ 1ರಂದು ಶವ ಪತ್ತೆಯಾಗಿದ್ದು, ರಮಾದೇವಿ ಮತ್ತು ರಾಜಯ್ಯ ಮರಣೋತ್ತರ ಪರೀಕ್ಷೆ ಮಾಡದಂತೆ ಕೇಳಿಕೊಂಡಿದ್ದರು. ಇದರಿಂದ ಪೊಲೀಸರಿಗೆ ಅನುಮಾನ ಬಂದಿತ್ತು. ರಮಾದೇವಿಯ ಮಗ ತನ್ನ ತಂದೆಯ ಸಾವನ್ನು ಅನುಮಾನಿಸಿ, ಪೊಲೀಸರಿಂದ ತನಿಖೆಗೆ ಒತ್ತಾಯಿಸಿದ್ದ. ಕೊನೆಗೆ ತನಿಖೆ ನಡೆಸಿದಾಗ ನಿಜಾಂಶ ಬಯಲಿಗೆ ಬಂದಿದೆ.
























