ಜನರ ಆಕ್ರೋಶದ ಹಿನ್ನೆಲೆಯಲ್ಲಿ ತನ್ನ ಮೇಲೆ ಆರೋಪ ಎಂದು ದೂರು
ಬೆಂಗಳೂರು : ಆರ್ಸಿಬಿ ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆಯನ್ನು ವಿಧಾನಸೌಧದ ಎದುರು ನಡೆಸುವಂತೆ ಕರೆ ಕೊಟ್ಟಿದ್ದೇ ಸರ್ಕಾರ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಆರೋಪಿಸಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಚಿವರು ವಿಧಾನಸೌಧ ಗ್ರ್ಯಾಂಡ್ ಸ್ಟೆಪ್ಸ್ ವೇದಿಕೆಯಲ್ಲಿ ಆಟಗಾರರನ್ನು ಸನ್ಮಾನಿಸಿದ್ದಾರೆ. ಸರ್ಕಾರ, ಸಚಿವರ ಮೇಲಿನ ಜನರ ಆಕ್ರೋಶದ ಹಾದಿ ತಪ್ಪಿಸಲು ಎಫ್ಐಆರ್ ದಾಖಲಿಸಲಾಗಿದೆ ಎಂದು ರಿಟ್ ಅರ್ಜಿಯಲ್ಲಿ ಕೆಎಸ್ಸಿಎ ಉಲ್ಲೇಖಿಸಿದೆ.
ಘಟನೆಯ ಹೊಣೆಯನ್ನು ಕೆಎಸ್ಸಿಎ ಮೇಲೆ ಹೊರಿಸಲು ಯತ್ನಿಸಲಾಗುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜನದಟ್ಟಣೆ ನಿರ್ವಹಣೆ ಆರ್ಸಿಬಿ ಹಾಗೂ ಪೊಲೀಸರ ಕರ್ತವ್ಯ. ಕರ್ನಾಟಕದ ಕ್ರಿಕೆಟ್ ನಿಯಂತ್ರಣವಷ್ಟೇ ಕೆಎಸ್ಸಿಎ ಜವಾಬ್ದಾರಿ ಎಂದು ಸಂಸ್ಥೆ ಹೇಳಿದೆ.
ಕೆಎಸ್ಸಿಎ ಆಡಳಿತ ಮಂಡಳಿಯವರನ್ನು ಬಂಧಿಸಲು ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಮಾಧ್ಯಮಗಳ ಮೂಲಕವೇ ಸಿಎಂ ಬಂಧಿಸುವ ಆದೇಶ ನೀಡಿದ್ದಾರೆ. ಪೊಲೀಸರನ್ನು ಅಮಾನತುಗೊಳಿಸುವ ಮೂಲಕ ಲೋಪ ಒಪ್ಪಿಕೊಂಡಿದ್ದಾರೆ. ಈಗ ಕೆಎಸ್ಸಿಎ ಮೇಲೆ ಹೊಣೆ ಹೊರಿಸಲು ಯತ್ನಿಸುತ್ತಿದ್ದಾರೆ ಎಂದು ರಿಟ್ ಅರ್ಜಿಯಲ್ಲಿ ಆರೋಪಿಸಲಾಗಿದೆ.
ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಘಟನೆಗೆ ಸರ್ಕಾರ ಹೊಣೆಯಲ್ಲ. ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ನಡೆದ ದುರಂತಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನೆ ನಡೆದ ದಿನವೇ ಸಂಜೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು.
ಅದಾದ ನಂತರ ಘಟನೆ ಸಂಬಂಧ ಯಾವುದೇ ಎಫ್ಐಆರ್ ದಾಖಲಾಗಿರಲಿಲ್ಲ. 11 ಅಸಹಜ ಸಾವು ಪ್ರಕರಣಗಳನ್ನು ಅಷ್ಟೇ ದಾಖಲಿಸಲಾಗಿತ್ತು. ನಂತರ ಜನ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಮತ್ತು ಪ್ರತಿಪಕ್ಷಗಳಿಂದ ತೀವ್ರ ಒತ್ತಡ ಎದುರಾಗುತ್ತಿದ್ದಂತೆಯೇ ಆರ್ಸಿಬಿ ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಘಟನೆ ಆರ್ಸಿಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೋಸಲೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
























