ಆರ್‍ ಸಿಬಿ ಸಂಭ್ರಮಾಚರಣೆ ದುರ್ಘಟನೆಯಲ್ಲಿ ಪೊಲೀಸರನ್ನು ಹರಕೆಯ ಕುರಿ ಮಾಡಲಾಗಿದೆ | ರಾಜ್ಯದ ಸಿ.ಎಂ, ಡಿ.ಸಿ.ಎಂ, ಗೃಹ ಸಚಿವರ ರಾಜೀನಾಮೆಗೆ ವಿಜಯೇಂದ್ರ ಆಗ್ರಹ

ಬೆಂಗಳೂರು: ಆರ್ ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ, 11 ಸಾವಿನ ಸಂಬಂಧ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ವಿಧಾನಸಭೆಯ ಪ್ರತಿಪಕ್ಷ ನಾಯಕರ ಕೊಠಡಿ ಸಂಖ್ಯೆ 160ರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಅವರು ಮಾತನಾಡಿ, ಎಫ್‍ಐಆರ್‍ ನಲ್ಲಿ ಕೆಎಸ್‍ಸಿಎ, ಆರ್.ಸಿ.ಬಿ, ಮತ್ತು ಏಜೆನ್ಸಿಯಾದ ಡಿ.ಎನ್.ಎಯನ್ನು ಆರೋಪಿಗಳಾಗಿ ಹೆಸರಿಸಿದ್ದಾರೆ. ಸ್ವತಃ ಮುಖ್ಯಮಂತ್ರಗಳೇ ಆರೋಪಿ ನಂಬರ್ 1, ಉಪ ಮುಖ್ಯಮಂತ್ರಿಗಳು ಆರೋಪಿ ನಂಬರ್ 2, ಮಾನ್ಯ ಗೃಹ ಸಚಿವ ಪರಮೇಶ್ವರ್ ಅವರು ಆರೋಪಿ ನಂಬರ್ 3 ಎಂದು ವಾಗ್ದಾಳಿ ನಡೆಸಿದರು.

ಕಾಲ್ತುಳಿತ ಹಾಗೂ 11 ಜನ ಅಮಾಯಕರ ಸಾವಿನ ಸಂಬಂಧ ಕೊನೆಗೂ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ರಾಜ್ಯ ಹೈಕೋರ್ಟ್ ಸ್ವಯಂಪ್ರೇರಿತ ಕೇಸ್ ತೆಗೆದುಕೊಂಡು ರಾಜ್ಯ ಸರಕಾರಕ್ಕೆ ಛೀಮಾರಿ ಹಾಕಿದ ನಂತರ ಸರಕಾರ ಎಚ್ಚತ್ತುಕೊಂಡಿದೆ ಎಂದು ವಿಶ್ಲೇಷಿಸಿದರು. ಮುಖ್ಯಮಂತ್ರಿಗಳು, ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡುವ ಬದಲಾಗಿ ತಾವೇ ಜವಾಬ್ದಾರಿ, ನೈತಿಕ ಹೊಣೆ ಹೊತ್ತು ಉಪ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ ಎಂದು ಮತ್ತೊಮ್ಮೆ ಒತ್ತಾಯಿಸಿದರು.





















































 
 

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‍ಸಿಎ), ಆರ್.ಸಿ.ಬಿ, ಮತ್ತು ಏಜೆನ್ಸಿಯಾದ ಡಿ.ಎನ್.ಎಯನ್ನು ಪ್ರಮುಖವಾಗಿ ಆರೋಪಿಗಳೆಂದು ಎಫ್‍ಐಆರ್‍ ನಲ್ಲಿ ಉಲ್ಲೇಖಿಸಿದ್ದಾರೆ. ಎಫ್‍ಐಆರ್ ತರುವಾಯ, ಮುಖ್ಯಮಂತ್ರಿಗಳು ಏಕಾಏಕಿ ಜಾಗೃತರಾಗಿದ್ದಾರೆ. ಮುಖ್ಯಮಂತ್ರಿಗಳು ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ಬೆಂಗಳೂರು ಕಮೀಷನರ್ ಸೇರಿ 5 ಜನ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಅರ್ಥಾತ್, ಮುಖ್ಯಮಂತ್ರಿಗಳು ಮೊನ್ನೆ ನಡೆದ ದುರ್ಘಟನೆ, 11 ಜನರ ಸಾವಿಗೆ ರಾಜ್ಯ ಸರಕಾರದಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ತಮ್ಮ ತಪ್ಪನ್ನು ಮುಚ್ಚಿ ಹಾಕಿಕೊಳ್ಳಲು ಪೊಲೀಸರನ್ನು ಹರಕೆಯ ಕುರಿಯಾಗಿ ರಾಜ್ಯ ಸರಕಾರ ಮಾಡಿದೆ ಎಂದು ಆರೋಪಿಸಿದರು.

ತಪ್ಪಿಸಿಕೊಳ್ಳುವ ಷಡ್ಯಂತ್ರ ಮುಖ್ಯಮಂತ್ರಿಗಳದು..

ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡಿ ತಪ್ಪಿಸಿಕೊಳ್ಳುವ ಷಡ್ಯಂತ್ರ ಮುಖ್ಯಮಂತ್ರಿಗಳದು ಎಂದು ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದರು.

ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ. ವೈಫಲ್ಯಕ್ಕಾಗಿ ಬೇಹುಗಾರಿಕಾ ದಳದ ಅಧಿಕಾರಿಗಳನ್ನು ಯಾಕೆ ಅಮಾನತು ಮಾಡಿಲ್ಲ? ಎಂದು ಕೇಳಿದರು. ಬೇಹುಗಾರಿಕಾ ದಳ ನೇರ ಸಿಎಂ ಕೆಳಗಡೆ ಬರುತ್ತದೆ; ಅವರನ್ನು ಅಮಾನತು ಮಾಡಿದರೆ ಇದು ಮುಖ್ಯಮಂತ್ರಿಗಳ ಬುಡಕ್ಕೇ ಬರಲಿದೆ. ಆದ್ದರಿಂದ ಅವರನ್ನು ಅಮಾನತು ಮಾಡಿಲ್ಲ ಎಂದು ತಿಳಿಸಿದರು. ನಾವು 30-40 ಸಾವಿರ ಜನರು ಬರುವ ನಿರೀಕ್ಷೆ ಇಟ್ಟುಕೊಂಡಿದ್ದೆವು. 2ರಿಂದ 3 ಲಕ್ಷ ಜನರು ಬಂದಿದ್ದಾರೆ. ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎನ್ನುವ ಮೂಲಕ ಬೇಹುಗಾರಿಕಾ ದಳದ ವೈಫಲ್ಯವನ್ನು ಸ್ವತಃ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಪೊಲೀಸರಿಂದ ಅನುಮತಿ ನಿರಾಕರಣೆ…

ನಿನ್ನೆ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿದ ಹೆಮ್ಮೆಯ ಆರ್‍ಸಿಬಿ ತಂಡಕ್ಕೆ ಅಭಿನಂದನೆಗಳು. ರಾಜ್ಯ ಅತ್ಯಂತ ಹೆಮ್ಮೆ ಹಾಗೂ ಖುಷಿಪಡುವ ಕೆಲಸವನ್ನು ಆರ್‍ಸಿಬಿ ತಂಡ ಮಾಡಿದ್ದು, ಅವರನ್ನು ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಅಭಿನಂದಿಸಲಿದ್ದೇವೆ. ಈ ಐತಿಹಾಸಿಕ ಕ್ಷಣದಲ್ಲಿ ನೀವೂ ಭಾಗಿಯಾಗಿ ಎಂದು ಸ್ವತಃ ಮುಖ್ಯಮಂತ್ರಿಗಳೇ ಸಾಮಾಜಿಕ ಜಾಲತಾಣದ ಮೂಲಕ ಕರೆ ಕೊಟ್ಟಿದ್ದರು. 3ರಂದು ಮ್ಯಾಚ್ ಆಗುವ ಮೊದಲೇ ಕೆಎಸ್‍ಸಿಎ, ಆರ್.ಸಿ.ಬಿ, ಮತ್ತು ಏಜೆನ್ಸಿಯಾದ ಡಿ.ಎನ್.ಎ ಕಡೆಯಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿದ್ದರು. ಸಂಭ್ರಮಾಚರಣೆಗೆ ಅನುಮತಿ ಕೋರಿದ್ದರು. ಲಕ್ಷೋಪಲಕ್ಷ ಆರ್‍ಸಿಬಿ ಅಭಿಮಾನಿಗಳು ಬರುವ ಕಾರಣ ನಾಳೆ ಸಂಭ್ರಮಾಚರಣೆಗೆ ಅನುಮತಿ ಕೊಡಲಾಗದು ಎಂದು ಪೊಲೀಸ್ ಅಧಿಕಾರಿಗಳು ಮುಚ್ಚಳಿಕೆ ಬರೆದುಕೊಟ್ಟಿದ್ದರು ಎಂದು ವಿವರಿಸಿದರು.

ಪೊಲೀಸ್ ಇಲಾಖೆ ಸಂಭ್ರಮಾಚರಣೆಗೆ ಅನುಮತಿ ಕೊಟ್ಟಿರಲಿಲ್ಲ. ಲಕ್ಷ ಲಕ್ಷ ಜನರು ಬರುವುದು ಗೊತ್ತಿದ್ದು ಹೀಗೆ ಹೇಳಿದ್ದಾರೆ. ಹಾಗಿದ್ದರೆ ರಾಜ್ಯ ಸರಕಾರಕ್ಕೆ ಯಾರು ಅನುಮತಿ ಕೊಟ್ಟರು ಎಂದು ಪ್ರಶ್ನಿಸಿದರು. ವಿಧಾನಸೌಧದ ಬಳಿ ಲಕ್ಷ ಲಕ್ಷ ಜನ ಆರ್‍ಸಿಬಿ ಅಭಿಮಾನಿಗಳು ಬಂದಿದ್ದರು. ಅವರಿಗೆ ಯಾರ ಅನುಮತಿ ಇತ್ತು ಎಂದು ಕೇಳಿದರು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅನುಮತಿ ಕೊಟ್ಟಿರಲಿಲ್ಲ; ಕಾನೂನುಬಾಹಿರವಾಗಿ ಕಾರ್ಯಕ್ರಮ ನಡೆದಿದೆ ಎಂದು ಎಫ್‍ಐಆರ್ ಮಾಡಿದ್ದಾರೆ. ಅಲ್ಲಿ ಅನುಮತಿ ಇಲ್ಲದಿದ್ದರೂ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ, ಅಲ್ಲಿ ಸಂಭ್ರಮಾಚರಣೆಯಲ್ಲಿ ಯಾಕೆ ಭಾಗವಹಿಸಿದ್ದರು? ಅಲ್ಲಿ ಕಪ್ ಹಿಡಿದು ಮುತ್ತಿಕ್ಕುವ ಕೆಲಸವನ್ನು ಯಾಕೆ ಮಾಡಿದರು ಎಂದು ಕೇಳಿದರು.

ಸರಕಾರ ಕಿತ್ತು ಹಾಕಬೇಕೆಂಬ ಆಶಯ ಜನಸಾಮಾನ್ಯರದು..

ಇವತ್ತು ಬೆಳಿಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆ ಬಳಿ ವಾಹನದಲ್ಲಿ ಬರುತ್ತಿದ್ದೆ. ಒಬ್ಬ ಆಟೋ ಚಾಲಕನನ್ನು ಮಾತನಾಡಿಸಿದೆ. ಏನ್ರೀ ವಿರೋಧ ಪಕ್ಷದವರು ನೀವಿದ್ದೀರಿ. ಪಾಪ 11 ಜನ ಅಮಾಯಕರು ಪ್ರಾಣ ಕಳಕೊಂಡಿದ್ದಾರೆ. ಈ ದರಿದ್ರ ಕಾಂಗ್ರೆಸ್ ಸರಕಾರವನ್ನು ನೀವು ಕಿತ್ತು ಹಾಕಬೇಕು ಎಂದು ಅವರು ಹೇಳಿದರು. ಇದು ಜನರ ಈಗಿನ ಆಶಯ ಎಂದು ಬಿ.ವೈ. ವಿಜಯೇಂದ್ರ ಅವರು ವಿವರಿಸಿದರು.

ಈ ವಿಜಯೋತ್ಸವ ಸರಕಾರಕ್ಕೆ ಯಾಕೆ ಬೇಕಿತ್ತು ಎಂದು ಕಾಂಗ್ರೆಸ್ಸಿನ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ಪ್ರಶ್ನಿಸಿದ್ದಾರೆ. ಆರ್‍ಸಿಬಿ ಗೆಲುವು ಸಾಧಿಸಿದೆ ಎಂದು ರಾಜ್ಯ ಸರಕಾರ ಯಾಕೆ ಸಂಭ್ರಮಾಚರಣೆ ಮಾಡಿದೆ ಎಂದು ಕೇಳಿದ್ದಾರೆ. 11 ಜನರ ಸಾವಿಗೆ ರಾಜ್ಯ ಸರಕಾರವೇ ಉತ್ತರಿಸಬೇಕಿದೆ ಎಂದಿದ್ದಾಗಿ ಗಮನ ಸೆಳೆದರು.

ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಜೆಡಿಎಸ್ ಸಂಸದ ಎಂ.ಮಲ್ಲೇಶ್ ಬಾಬು, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಹರೀಶ್ ಪೂಂಜಾ ಮತ್ತು ಜೆಡಿಎಸ್ ಮುಖಂಡರು ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯರಾದ ಹೆಚ್.ಎಂ.ರಮೇಶ್ ಗೌಡ, ಆರ್. ಚೌಡ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top