ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿಯಾಗಿ ಭೀಕರ ಅಪಘಾತ
ಚೆನ್ನೈ: ಮಲಯಾಳಂ ಚಿತ್ರರಂಗದ ಖ್ಯಾತ ನಟ ಶೈನ್ ಟಾಮ್ ಚಾಕೊ ಹಾಗೂ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಶುಕ್ರವಾರ ಬೆಳಗ್ಗೆ ತಮಿಳುನಾಡು ಬಳಿ ಅಪಘಾತಕ್ಕೀಡಾಗಿ ಚಾಕೊ ತಂದೆ ಸಿಪಿ ಚಾಕೊ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಯಿಗೆ ಗಂಭೀರಗಾಯಗಳಾಗಿವೆ. ಅಪಘಾತದ ಸಮಯದಲ್ಲಿ, ಶೈನ್, ಹಾಗೂ ಅವರ ತಾಯಿ, ಸಹೋದರ, ತಂದೆ ಮತ್ತು ಚಾಲಕನೊಂದಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಶೈನ್ ಮತ್ತು ಅವರ ತಾಯಿಯನ್ನು ಧರ್ಮಪುರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಶೈನ್ ಸಹೋದರ ಮತ್ತು ಕಾರು ಚಾಲಕ ಕೂಡ ಗಾಯಗೊಂಡಿದ್ದಾರೆ. ತಮಿಳುನಾಡಿನ ಧರ್ಮಪುರಿಯ ಪಾಲಕೊಟ್ಟೈ ಬಳಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಅವರ ಕಾರು ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಶೈನ್ ಟಾಮ್ ಚಾಕೊ ಇತ್ತೀಚೆಗೆ ಮಾದಕ ದ್ರವ್ಯ ಸೇವನೆಯ ಆರೋಪದ ಮೇರೆಗೆ ಸುದ್ದಿಯಲ್ಲಿದ್ದರು. ಬಂಧನದ ನಂತರ ನಟ ಪ್ರಸ್ತುತ ಪೊಲೀಸ್ ತನಿಖೆಯಲ್ಲಿದ್ದಾರೆ. ಅವರ ಸಹನಟಿ ವಿನ್ಸಿ ಅಲೋಶಿಯಸ್ ಅವರು ‘ಸೂತ್ರವಾಸ್ಯಂ’ ಸೆಟ್‌ಗಳಲ್ಲಿ ಮಾದಕ ದ್ರವ್ಯಗಳನ್ನು ಬಳಸಿದ್ದಾರೆ ಮತ್ತು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
























