ಐಫೆಲ್‌ ಟವರ್‌ಗಿಂತ ಎತ್ತರದ ರೈಲ್ವೆ ಸೇತುವೆ ಇಂದು ಕಾಶ್ಮೀರದಲ್ಲಿ ಲೋಕಾರ್ಪಣೆ

ಚೆನಾಬ್ ನದಿಯ ಮೇಲೆ ನಿರ್ಮಿಸಿದ 1.3 ಕಿಮೀ ಉದ್ದ 359 ಮೀಟರ್ ಎತ್ತರದ ಬ್ರಿಜ್‌

ನವದೆಹಲಿ: ಪ್ಯಾರಿಸ್‌ನ ಐಫೆಲ್‌ ಟವರ್‌ಗಿಂತಲೂ ಎತ್ತರವಾದ ರೈಲ್ವೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಕಾಶ್ಮೀರದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಪಹಲ್ಗಾಮ್ ಉಗ್ರ ದಾಳಿ ಬಳಿಕ ಮೋದಿ ಇಂದು ಮೊದಲ ಬಾರಿಗೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಒಟ್ಟು ಸುಮಾರು 46 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಪ್ರಧಾನಿ ಮೋದಿ ಇಂದು ಕಾಶ್ಮೀರದಲ್ಲಿ ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಚೆನಾಬ್‌ ಸೇತುವೆ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹಿರಿಮೆಗೂ ಪಾತ್ರವಾಗಿದೆ. ಈ ಸೇತುವೆ ಐಫೆಲ್ ಟವರ್‌ಗಿಂತ ಎತ್ತರವಾಗಿದ್ದು, ಭಾರತದ ಇಂಜಿನಿಯರಿಂಗ್ ಕೌಶಲದ ಸಂಕೇತವೆಂದು ಪರಿಗಣಿಸಲಾಗಿದೆ. ಇದನ್ನು ನಿರ್ಮಿಸಲು ಸುಮಾರು 1500 ಕೋಟಿ ರೂ. ವೆಚ್ಚವಾಗಿದೆ. ಇದರ ನಂತರ, ಅವರು ದೇಶದ ಮೊದಲ ಕೇಬಲ್-ಸ್ಟೇ ರೈಲು ಸೇತುವೆಯಾದ ಅಂಜಿ ರೈಲು ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಕತ್ರಾದಿಂದ ಶ್ರೀನಗರಕ್ಕೆ ಎರಡು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.

ರೈಲ್ವೆ ಸಚಿವಾಲಯದ ಪ್ರಕಾರ ಉಧಾಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ ಯೋಜನೆಯ ಒಟ್ಟು ಉದ್ದ 272 ಕಿ.ಮೀ ಮತ್ತು ಇದರ ವೆಚ್ಚ ಸುಮಾರು 43,780 ಕೋಟಿ ರೂ. ಇದರಲ್ಲಿ 36 ಸುರಂಗಗಳು ಮತ್ತು 943 ಸೇತುವೆಗಳು ಸೇರಿವೆ. ಈ ಯೋಜನೆಯನ್ನು 1997ರಲ್ಲಿ ಪ್ರಾರಂಭಿಸಲಾಯಿತು. 272 ಕಿ.ಮೀ ಉದ್ದದ ಉಧಾಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯುಎಸ್‌ಬಿಆರ್‌ಎಲ್) ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಪ್ರಧಾನಿ ಮೋದಿಯವರ ರಾಜಕೀಯ ಇಚ್ಛಾಶಕ್ತಿ ಮತ್ತು ತಾಂತ್ರಿಕ ತಂಡಗಳಿಗೆ ಬೆಂಬಲ ಪ್ರಮುಖ ಪಾತ್ರ ವಹಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.























































 
 

2004ರಿಂದ 2014ರವರೆಗೆ ಸಮತಟ್ಟಾದ ಪ್ರದೇಶಗಳಲ್ಲಿ ಮಾತ್ರ ಹಳಿಗಳನ್ನು ಹಾಕಲಾಗುತ್ತಿತ್ತು, ಆದರೆ ಕಷ್ಟಕರವಾದ ಪರ್ವತ ಪ್ರದೇಶಗಳಲ್ಲಿ ಯಾವುದೇ ಕೆಲಸ ಮಾಡಲಾಗಿಲ್ಲ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ, ಈ ಅಸಾಧ್ಯ ಕನಸು ಇಂದು ನನಸಾಗಿದೆ ಎಂದು ಹೇಳಿದ್ದಾರೆ.

359 ಮೀಟರ್‌ ಎತ್ತರದ ಸೇತುವೆ

ಚೆನಾಬ್ ನದಿಯ ಮೇಲೆ ನಿರ್ಮಿಸಲಾದ 1.3 ಕಿಮೀ ಉದ್ದದ ರೈಲ್ವೆ ಸೇತುವೆ 359 ಮೀಟರ್ ಎತ್ತರವಾಗಿದ್ದು, ಇದು ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿದೆ. ಈ ಸೇತುವೆ ಗಂಟೆಗೆ 260 ಕಿಮೀ ವೇಗದ ಗಾಳಿ ಮತ್ತು ಭೂಕಂಪನ ವಲಯದಲ್ಲಿಯೂ ಸ್ಥಿರವಾಗಿರುತ್ತದೆ. ಇದರ ನಿರ್ಮಾಣದಲ್ಲಿ 30,000 ಟನ್ ಉಕ್ಕು ಮತ್ತು ಅರ್ಧ ಫುಟ್ಬಾಲ್ ಮೈದಾನದಷ್ಟು ಅಗಲದ ಅಡಿಪಾಯವನ್ನು ಬಳಸಲಾಗಿದೆ.

ಕೇಬಲ್-ಸ್ಟೇ ತಂತ್ರಜ್ಞಾನವನ್ನು ಬಳಸಿದ ದೇಶದ ಮೊದಲ ರೈಲ್ವೆ ಸೇತುವೆ ಅಂಜಿ ಸೇತುವೆಯಾಗಿದೆ. ಸಾಮಾನ್ಯವಾಗಿ ಈ ತಂತ್ರಜ್ಞಾನವನ್ನು ಹೆದ್ದಾರಿಗಳಲ್ಲಿ ಬಳಸಲಾಗುತ್ತದೆ, ಆದರೆ ಇಲ್ಲಿ ಇದನ್ನು 4,000 ಟನ್‌ಗಳಷ್ಟು ರೈಲು ಹೊರೆಗಳನ್ನು ಹೊರಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top