ಪುತ್ತೂರು : ಶ್ರದ್ಧಾ ಕೇಂದ್ರಗಳ ಮೂಲಕ ಧರ್ಮ ರಕ್ಷಣೆಯ ಕಾರ್ಯಗಳು ಆಗುತ್ತವೆ. ದೇವಾಲಯಗಳು ಯುವ ಪೀಳಿಗೆಗೆ ಸಂಸ್ಕಾರ, ಸಂಪದ್ರಾಯಗಳನ್ನು ತಿಳಿಸಿಕೊಡುವ ಕೇಂದ್ರಗಳಾಗಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಐತಿಹಾಸಿಕ ಕ್ಷೇತ್ರ ಪಡುಮಲೆ ಶ್ರೀ ಕೂವೆಶಾಸ್ತಾರ ದೇವಾಲಯದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಆರನೇ ದಿನ ಗುರುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಸೀಮಿತ ಅವಧಿಯಲ್ಲಿ ಅಭೂತಪೂರ್ವ ದೇವಾಲಯ ನಿರ್ಮಾಣ ಪಡುಮಲೆಯಲ್ಲಿ ಆಗಿದೆ. ಆ ಮೂಲಕ ಐತಿಸಹಾಸಿಕ ಹಿನ್ನೆಲೆಯಳ್ಳ ಪಡುಮಲೆಯಲ್ಲಿ ಶ್ರದ್ಧಾಕೇಂದ್ರ ಎಲ್ಲರನ್ನೂ ಸೆಳೆಯಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರದ ವಾಸ್ತುಶಿಲ್ಪಿ ರಮೇಶ್ ಕಾರಂತ ಬೆದ್ರಡ್ಕ, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಭಾಗವಹಿಸಿ ಶುಭಹಾರೈಸಿದರು. ಇರ್ದೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್, ಹಿರಿಯರಾದ ರಾಮಣ್ಣ ಗೌಡ ಕರ್ಪುಡಿಕಾನ, ಕೃಷ್ಣ ರೈ ಕುದ್ಕಾಡಿ, ರಮಾ ಎಂ.ಎಲ್. ರಾವ್ ಪಡುಮಲೆ, ಬಡಗನ್ನೂರು ಗ್ರಾ.ಪಂ. ಸದಸ್ಯರಾದ ಲಿಂಗಪ್ಪ ಗೌಡ ಮೋಡಿಕೆ, ದಮಯಂತಿ ನೆಕ್ಕರೆ, ಪುಷ್ಪಲತಾ ಎಂ., ದೇವಾಳಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ನಿರ್ಮಾಣ ಕೆಲಸಗಳನ್ನು ನಿರ್ವಹಿಸಿದ ಪ್ರದೀಪ್ ಪಾಠಕ್, ಸುಧಾಕರ ಆಚಾರ್ ಚಾರ್ಮಾಡಿ, ಸಂತೋಷ್ ಆಚಾರ್ ಹಿರಿಯಡ್ಕ, ಮನೋಜ್ ತಚ್ಚಂಗಾಡ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಿವೃತ್ತ ಮುಖ್ಯಗುರು ನಾರಾಯಣ ನಾಯ್ಕ್ ಸ್ವಾಗತಿಸಿದರು. ಬಳಿಕ ಹನುಮಗರಿ ಶ್ರೀ ಕೋದಂಡರಾಮ ಯಕ್ಷಗಾನ ಮಂಡಳಿಯಿಂದ ಕಲ್ಯಾಣತ್ರಯ ಪ್ರಸಂಗದ ಯಕ್ಷಗಾನ ನಡೆಯಿತು.
























