ಪುತ್ತೂರು : ಉಬರ್ ಚೆಸ್ ಅಕಾಡೆಮಿ ಹಾಗೂ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಅಂತರ್ ಜಿಲ್ಲಾ ಮಟ್ಟದ ರ್ಯಾಪಿಡ್ ಚೆಸ್ ಪಂದ್ಯಾಟ ಇತ್ತೀಚೆಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಸಂಚಾಲಕ ಚಂದ್ರಶೇಖರ್ ನಾಯರ್ ಚೆಸ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ಚೆಸ್ ಪಂದ್ಯಾಟದಲ್ಲಿ ಗ್ರಾಮೀಣ ಪ್ರತಿಭೆಗಳೂ ಬಹಳ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದು, ಅವರಿಗೂ ಅವಕಾಶ ನೀಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ. ಪಂದ್ಯಾಟದಲ್ಲಿ ಸೋತರೂ, ಗೆದ್ದರೂ ಈ ಆಟದಲ್ಲಿ ಪಾಲ್ಗೊಳ್ಳುವುದನ್ನು ಮುಂದುವರಿಸಿಕೊಂಡು ಹೋಗಿ. ಈ ಮೂಲಕ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಎಂದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಅಧ್ಯಕ್ಷ ಡಾ.ಶಿವಪ್ರಕಾಶ್ ಎಂ., ಅಧ್ಯಕ್ಷತೆ ವಹಿಸಿ ಮಾತನಾಡಿ, ಚೆಸ್ ಕ್ರೀಡೆಯಿಂದ ಏಕಾಗ್ರತೆ ಉಂಟಾಗಲು ಸಾಧ್ಯವಾಗುತ್ತಿದ್ದು, ಇದು ವಿದ್ಯಾರ್ಥಿಗಳ ಕಲಿಕೆಗೂ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಸುಮಾರು 300 ಕ್ಕೂ ಅಧಿಕ ಮಂದಿ ಚೆಸ್ ಸ್ಪರ್ಧೆಯಲ್ಲಿ ಪಾಲ್ಗೊಡಿರುವುದು ಸಂತೋಷದ ವಿಷಯ ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಡಿಕೆಸಿಎ ಅಧ್ಯಕ್ಷ ರಮೇಶ್ ಕೋಟೆ, ಅಂತರಾಷ್ಟ್ರೀಯ ಚೆಸ್ ತರಬೇತುದಾರ ವಸಂತ ಬಿ.ಎಚ್., ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಸತೀಶ್್ ಕುಮಾರ್ ರೈ ಎಸ್. ಪಾಲ್ಗೊಂಡು ಶುಭ ಹಾರೈಸಿದರು.
ಉಬಾರ್ ಚೆಸ್ ಅಕಾಡೆಮಿ ನಿರ್ದೇಶಕ ಜಗನ್ನಾಥ ಅಡಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
























