ತ್ರಿಪುರಾ, ನಾಗಾಲ್ಯಾಂಡ್ ಎನ್.ಡಿ.ಎ.ಗೆ ಸ್ಪಷ್ಟ ಬಹುಮತ | ಮೇಘಾಲಯದಲ್ಲಿ ಎನ್.ಸಿ.ಪಿ. ಜೊತೆ ಬಿಜೆಪಿ ಸರ್ಕಾರ!
ನವದೆಹಲಿ: ಗುರುವಾರ ಪ್ರಕಟವಾದ ಈಶಾನ್ಯ ಭಾರತದ ಚುನಾವಣಾ ಫಲಿತಾಂಶ ದೇಶದ ಪ್ರಗತಿ, ಸ್ಥಿರತೆಗೆ ಪ್ರೇರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸರಣಿ ಟ್ವೀಟಿನಲ್ಲಿ ತಿಳಿಸಿದ್ದಾರೆ.
ತ್ರಿಪುರಾ, ನಾಗಾಲ್ಯಾಂಡಿನಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಸ್ಪಷ್ಟ ಬಹುಮತ ಪಡೆದಿದ್ದರೆ, ಮೇಘಾಲಯದಲ್ಲಿ ಎನ್.ಸಿ.ಪಿ. ಜೊತೆಗೆ ಬಿಜೆಪಿ ಮೈತ್ರಿ ಸರಕಾರ ರಚನೆಯಾಗಲಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ನರೇಂದ್ರ ಮೋದಿ, ‘ಧನ್ಯವಾದ ತ್ರಿಪುರಾ! ಈ ಮತ ಪ್ರಗತಿ ಮತ್ತು ಸ್ಥಿರತೆಗಾಗಿ. ಬಿಜೆಪಿಯು ರಾಜ್ಯದ ಅಭಿವೃದ್ಧಿಯ ಪಥಕ್ಕೆ ಉತ್ತೇಜನ ನೀಡಲಿದೆ. ತ್ರಿಪುರಾದಲ್ಲಿ ಬೇರು ಮಟ್ಟದಿಂದ ಅದ್ಬುತವಾಗಿ ಶ್ರಮಿಸಿದ ಬಿಜೆಪಿಯ ಎಲ್ಲ ಕಾರ್ಯಕರ್ತರ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ತ್ರಿಪುರಾ ಫಲಿತಾಂಶ:
60 ಸದಸ್ಯ ಬಲದ ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 54 ಕಡೆ ಹಾಗೂ ಅದರ ಮಿತ್ರ ಪಕ್ಷದ ಇಂಡಿಜೀನಿಯಸ್ ಪೀಪಲ್ಸ್ ಪ್ರಂಟ್ ಆಫ್ ತ್ರಿಪುರಾ (ಐಪಿಎಫ್ಟಿ) 6 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.
ಬಿಜೆಪಿ 32 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದು, ಐಪಿಎಫ್ಟಿ 1 ಕ್ಷೇತ್ರ ಜಯಿಸಿದೆ. ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಹೊಸ ಪಕ್ಷ ತಿಪ್ರ ಮೋಥಾ ಪಾರ್ಟಿ 13 ಸ್ಥಾನಗಳನ್ನು ಗೆದ್ದುಕೊಂಡಿದೆ. ಉಳಿದಂತೆ ಕಮ್ಯುನಿಸ್ಟ್ ಪಾರ್ಟಿ (ಸಿಪಿಐ) 11 ಮತ್ತು ಕಾಂಗ್ರೆಸ್ 3 ಸ್ಥಾನಗಳನ್ನು ಜಯಿಸಿವೆ.
ನಾಗಾಲ್ಯಾಂಡ್ ಫಲಿತಾಂಶ:
ನಾಗಾಲ್ಯಾಂಡ್ ವಿಧಾನಸಭೆಯ 60 ಕ್ಷೇತ್ರಗಳ ಪೈಕಿ 56 ಕ್ಷೇತ್ರಗಳ ಫಲಿತಾಂಶ ಹೊರಬಿದಿದ್ದೆ. ಎನ್ಡಿಪಿಪಿ (23) ಮತ್ತು ಬಿಜೆಪಿ (12) ಮೈತ್ರಿಕೂಟ 35 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಉಳಿದಂತೆ ಕಾಂಗ್ರೆಸ್ 6, ಎನ್ಪಿಪಿ 5, ಎನ್ಪಿಎಫ್ 2, ಎಲ್ಜೆಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಮೇಘಾಲಯ ಅತಂತ್ರ ಫಲಿತಾಂಶ:
ಮೇಘಾಲಯದ ಒಟ್ಟು 60 ಕ್ಷೇತ್ರಗಳ ಪೈಕಿ 59 ಸ್ಥಾನಗಳಿಗೆ ಫೆಬ್ರುವರಿ 27ರಂದು ಚುನಾವಣೆ ನಡೆದಿತ್ತು. ಶಿಲ್ಲಾಂಗ್ ವಿಧಾನಸಭಾ ಕ್ಷೇತ್ರದ ಯುನೈಟೆಡ್ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಎಚ್.ಡಿ.ಆರ್. ಲಿಂಗ್ಡೊ ಅವರು ಮೃತಪಟ್ಟಿರುವುದರಿಂದ ಆ ಕ್ಷೇತ್ರದ ಮತದಾನವನ್ನು ಮುಂದೂಡಲಾಗಿದೆ.
59 ಕ್ಷೇತ್ರಗಳ ಪೈಕಿ 57 ಕ್ಷೇತ್ರಗಳ ಫಲಿತಾಂಶ ಗುರುವಾರ ರಾತ್ರಿ ಪ್ರಕಟವಾಗಿದ್ದು, ಎನ್ಪಿಪಿ 24ರಲ್ಲಿ ಗೆದ್ದು 2ರಲ್ಲಿ ಮುನ್ನಡೆ ಸಾಧಿಸಿದೆ. ಯುಡಿಪಿ 11, ಕಾಂಗ್ರೆಸ್ 5, ಟಿಎಂಸಿ 5, ಬಿಜೆಪಿ 2, ಎಚ್ಎಸ್ಪಿಡಿಪಿ 2, ಪಿಡಿಎಫ್ 2, ವಾಯ್ಸ್ ಆಫ್ ಪೀಪಲ್ ಪಾರ್ಟಿ 4, ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
























