ಪತ್ನಿ, ಮಗುವನ್ನು ಕೊಂದು ಆತ್ಮಹತ್ಯೆ ಪ್ರಕರಣ : ಇಬ್ಬರ ಬಂಧನ

ಡೆತ್‌ನೋಟ್‌ನಲ್ಲಿತ್ತು ಪಕ್ಷಿಕೆರೆಯಲ್ಲಿ ನಡೆದ ಬೆಚ್ಚಿಬೀಳಿಸಿದ ಕೃತ್ಯದ ಹಿಂದಿನ ಕಾರಣ

ಮಂಗಳೂರು: ಮೂಲ್ಕಿ ಸಮೀಪ ಕೆಮ್ರಾಲ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಕ್ಷಿಕೆರೆಯಲ್ಲಿ ಸಂಭವಿಸಿದ್ದ ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಇಬ್ಬರನ್ನು ಮೂಲ್ಕಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೃತ ಕಾರ್ತಿಕ್‌ನ ತಾಯಿ ಶ್ಯಾಮಲಾ ಭಟ್, ಸಹೋದರಿ ಕಣ್ಮಣಿ ಬಂಧಿತರು. ಆತ್ಮಹತ್ಯೆಗೆ ಮೊದಲು ಕೌಟುಂಬಿಕ ಕಲಹದ ಬಗ್ಗೆ ಕಾರ್ತಿಕ್ ಭಟ್ ಡೆತ್‌ನೋಟ್ ಬರೆದಿದ್ದ. ಈ ಹಿನ್ನೆಲೆಯಲ್ಲಿ ಕಾರ್ತಿಕ್ ಕುಟುಂಬದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನಮ್ಮ ಸಂಸಾರ ಹಾಳು ಮಾಡಿದ್ದೇ ತಂದೆ, ತಾಯಿ, ಸಹೋದರಿ. ಇಂತಹ ತಂದೆ, ತಾಯಿ ಯಾರಿಗೂ ಸಿಗಬಾರದು. ನಮ್ಮ ಅಂತ್ಯಸಂಸ್ಕಾರವನ್ನು ಅತ್ತೆ ಮಾವ ನಡೆಸಿಕೊಡಬೇಕು ಎಂದು ಡೆತ್‌ನೋಟ್‌ನಲ್ಲಿ ಕಾರ್ತಿಕ್ ಬರೆದಿಟ್ಟಿದ್ದ.
ಪತ್ನಿ ಪ್ರಿಯಾಂಕ ಪೋಷಕರು ಕಾರ್ತಿಕ್ ತಂದೆ ತಾಯಿ ಹಾಗೂ ಸಹೋದರಿ ವಿರುದ್ಧ ದೂರು ನೀಡಿದ್ದರು. ಕಾರ್ತಿಕ್ ಕೊಲೆ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಅತ್ತೆ ಮಾವ ಕಿರುಕುಳದಿಂದಲೇ ಈ ದುರಂತ ನಡೆದಿದೆ. ಸೂಕ್ತ ತನಿಖೆ ನಡೆಸುವಂತೆ ಮೃತ ಪ್ರಿಯಾಂಕಾ ಪೋಷಕರು ಆಗ್ರಹಿಸಿದ್ದಾರೆ.
ಸಹಕಾರಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್‌ ಭಟ್‌ (32) ತನ್ನ ಪುಟ್ಟ ಮಗು ಹೃದಯ್‌ (4) ಹಾಗೂ ಪತ್ನಿ ಪ್ರಿಯಾಂಕ (28) ಅವರನ್ನು ಕೊಂದು ತಾನು ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಬೆಳ್ಳಾಯರು ಗ್ರಾಮದ ರೈಲ್ವೆ ಟ್ರ್ಯಾಕ್‌ನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಪೊಲೀಸ್‌ ಇಲಾಖೆ ತನಿಖೆ ಚುರುಕುಗೊಳಿಸಿ ಸೋಮವಾರ ಕಾರ್ತಿಕ್‌ ಹಾಗೂ ಪ್ರಿಯಾಂಕ ಬಳಸುತ್ತಿದ್ದ ಮೊಬೈಲ್‌ ಫೋನ್‌ಗಳು ಹಾಗೂ ಮನೆಯಲ್ಲಿ ಅವರಿದ್ದ ಕೋಣೆಯಲ್ಲಿ ಪತ್ತೆಯಾದ 2 ಚೂರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪತ್ನಿಗೆ ಅತ್ತೆ ಮಾವನೊಂದಿಗೆ ಮನಸ್ತಾಪ ಇದ್ದ ಹಿನ್ನೆಲೆ ಕಾರ್ತಿಕ್ ಕುಟುಂಬ ಮನೆಯ ಕೋಣೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿತ್ತು. ಕಾರ್ತಿಕ್ ತಂದೆ ಜನಾರ್ದನ ಭಟ್ ಪಕ್ಷಿಕೆರೆ ಜಂಕ್ಷನ್‌ನಲ್ಲಿ ಹೋಟೆಲ್ ನಡೆಸಿಕೊಂಡಿದ್ದು, ಎಂದಿನಂತೆಯೇ ನ.9ರಂದು ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಹೆಂಡತಿ ಮಗುವನ್ನು ಕಾರ್ತಿಕ್ ಹತ್ಯೆ ಮಾಡಿದ್ದ. ಹತ್ಯೆಯ ಬಳಿಕ ಮಧ್ಯಾಹ್ನದ ವೇಳೆಗೆ ರೈಲಿಗೆ ತಲೆ ಕೊಟ್ಟು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಒಂದೇ ಮನೆಯ ಬೇರೆ ಬೇರೆ ಕೋಣೆಯಲ್ಲಿ ಕಾರ್ತಿಕ್‌ ಹಾಗೂ ಅವರ ಹೆತ್ತವರು ವಾಸ ಮಾಡಿಕೊಂಡಿದ್ದು, ಮನೆಯಲ್ಲಿದ್ದ ಕೊಣೆಯಲ್ಲಿ ನೇತು ಹಾಕಲಾಗಿದ್ದ ಗ್ರೂಪ್‌ ಫೋಟೋದಲ್ಲಿ ಕಾರ್ತಿಕ್‌ ಭಟ್‌, ಪತ್ನಿ ಹಾಗೂ ಮಗುವಿನ ಫೋಟೋಗೆ ಮಸಿ ಬಳಿಯಲಾಗಿರುವುದು ಪತ್ತೆಯಾಗಿದೆ. ಕುಟುಂಬದ ಒಳಗಿನ ಮನಸ್ತಾಪ ಎಷ್ಟು ತೀವ್ರವಾಗಿತ್ತೆಂದು ಇದರಿಂದ ತಿಳಿದು ಬರುತ್ತದೆ. ಮರಣೋತ್ತರ ಪರೀಕ್ಷೆಗಳು ನಡೆದಿದ್ದು, ವರದಿ ಇನ್ನಷ್ಟೇ ಪೊಲೀಸರ ಕೈ ಸೇರಬೇಕಿದೆ. ಕಾರ್ತಿಕ್‌ ಪತ್ನಿ ಮತ್ತು ಮಗು ಮೃತದೇಹ ತಮ್ಮದೇ ಮನೆಯ ಕೋಣೆಯಲ್ಲಿ ದಿನವಿಡೀ ಬಿದ್ದುಕೊಂಡಿದ್ದರೂ, ಮನೆಯಲ್ಲಿದ್ದ ಕಾರ್ತಿಕ್‌ ಅವರ ಹೆತ್ತವರಿಗೆ ತಿಳಿದಿಲ್ಲ ಎನ್ನಲಾಗಿದೆ. ಕೆಮ್ರಾಲ್‌ ಗ್ರಾಮ ಪಂಚಾಯತ್‌ನ ಹತ್ತಿರದ ವನಜಾಕ್ಷಿ ಫ್ಲ್ಯಾಟ್‌ನಲ್ಲಿ ಜನಾರ್ದನ-ಶ್ಯಾಮಲಾ ಭಟ್‌ ಹಾಗೂ ಪುತ್ರ ಕಾರ್ತಿಕ್‌ ಕುಟುಂಬ ವಾಸವಿತ್ತು.
ಕಾರ್ತಿಕ್‌ ಭಟ್‌ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಹತ್ಯೆ ನಡೆಸಿದ ಬಳಿಕ ದ್ವಿಚಕ್ರ ವಾಹನವನ್ನು ಕಲ್ಲಾಪು ದೇವಸ್ಥಾನ ಬಳಿ ಇಟ್ಟು ರೈಲು ಹಳಿಯ ಮೇಲೆ ಕೈಗೆ ಬಟ್ಟೆ ಸುತ್ತಿಕೊಂಡು ಹೋಗುವ ದೃಶ್ಯ ಅಲ್ಲಿನ ಪರಿಸರದ ಸಿಸಿ ಕೆಮರಾದಲ್ಲಿ ದಾಖಲಾಗಿದೆ ಎನ್ನಲಾಗಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top