ವೋಟು ಬೇಕಾ ಆರ್‌ಎಸ್‌ಎಸ್‌ ನಿಷೇಧಿಸಿ, 1000 ಕೋ. ರೂ. ಕೊಡಿ!

ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಬೆಂಬಲ ನೀಡಲು ಷರತ್ತು ಹಾಕಿದ ಉಲೇಮಾ ಬೋರ್ಡ್‌

ಮುಂಬಯಿ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಕಣ ಕಾವೇರಿದ್ದು ವಿವಿಧ ಸಮುದಾಯಗಳ ಬೆಂಬಲ ಗಳಿಸಲು ಪಕ್ಷಗಳು ನಾನಾ ರೀತಿಯ ಕಸರತ್ತು ನಡೆಸುತ್ತಿವೆ. ಈ ನಡುವೆ ಕಾಂಗ್ರೆಸ್-ಶಿವಸೇನೆ ಉದ್ಧವ್ ಠಾಕ್ರೆ ಬಣ, ಸಮಾಜವಾದಿ ಪಕ್ಷಗಳ ಮಹಾವಿಕಾಸ್ ಅಘಾಡಿ ಮೈತ್ರಿಕೂಟಕ್ಕೆ (ಎಂವಿಎ) ಬೆಂಬಲ ಸೂಚಿಸಲು ಆಲ್‌ ಇಂಡಿಯಾ ಉಲೇಮಾ ಬೋರ್ಡ್‌ ಆರ್‌ಎಸ್‌ಎಸ್ ನಿಷೇಧ, 1000 ಕೋ. ರೂ. ಅನುದಾನ ಸೇರಿದಂತೆ 17 ಷರತ್ತುಗಳನ್ನು ಮುಂದಿಟ್ಟು ಪತ್ರ ಬರೆದಿರುವುದು ಇಡೀ ದೇಶದಲ್ಲಿ ಚರ್ಚೆಗೆ ಕಾರಣವಾಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎಂವಿಎಗೆ ಷರತ್ತುಬದ್ಧ ಬೆಂಬಲ ನೀಡಲು ಅಖಿಲ ಭಾರತ ಉಲೇಮಾ ಬೋರ್ಡ್ ನಿರ್ಧರಿಸಿದ್ದು, ಮೂರು ಮೈತ್ರಿಪಕ್ಷಗಳ ನಾಯಕರಿಗೆ ಪತ್ರದ ಮೂಲಕ ಬೆಂಬಲದ ನಿರ್ಧಾರ ತಿಳಿಸಿದೆ. ಆದರೆ ಇದಕ್ಕಾಗಿ ತನ್ನ 17 ಬೇಡಿಕೆಗಳನ್ನೂ ಮುಂದಿಟ್ಟಿದೆ.
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಅವರಿಗೆ ಉಲೇಮಾ ಬೋರ್ಡ್ ಪತ್ರ ಬರೆದು ತನ್ನ ನೆರವನ್ನು ಘೋಷಿಸಿದೆಯಾದರೂ ಅದು ಷರತ್ತುಬದ್ಧ ಬೆಂಬಲ ಎಂದು ಸ್ಪಷ್ಟಪಡಿಸಿದೆ.

ಆರ್‌ಎಸ್‌ಎಸ್‌ ನಿಷೇಧಿಸಬೇಕು, ಕೇಂದ್ರದ ವಕ್ಫ್‌ ತಿದ್ದುಪಡಿ ಮಸೂದೆಯನ್ನು ವಿರೋಧಿಸಬೇಕು. ಪೊಲೀಸ್‌ ಇಲಾಖೆ ಸೇರಿ ನೇಮಕಾತಿಗಳಲ್ಲಿ ಮಹಾರಾಷ್ಟ್ರದ ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು. ಅತಿಕ್ರಮಣಗೊಂಡ ವಕ್ಫ್ ಆಸ್ತಿಗಳನ್ನು ಮರಳಿ ಪಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂಬಿತ್ಯಾದಿ 17 ಬೇಡಿಕೆಗಳನ್ನು ಉಲೇಮಾ ಮಂಡಳಿ ಮುಂದಿಟ್ಟಿದೆ.
ಮಹಾರಾಷ್ಟ್ರದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಮರಿಗೆ ಶೇ. 10 ಮೀಸಲಾತಿ ನೀಡಬೇಕು, ಮಹಾರಾಷ್ಟ್ರದ 48 ಜಿಲ್ಲೆಗಳಲ್ಲಿ ಅತಿಕ್ರಮಣಗೊಂಡಿರುವ ವಕ್ಫ್ ಆಸ್ತಿಗಳನ್ನು ಮರಳಿ ಪಡೆಯಲು ಕಾನೂನು ರೂಪಿಸಬೇಕು. ಮಹಾರಾಷ್ಟ್ರ ವಕ್ಫ್ ಬೋರ್ಡ್​ಗೆ 1,000 ಕೋಟಿ ರೂ. ಅನುದಾನ ಒದಗಿಸಬೇಕು. ಮಹಾರಾಷ್ಟ್ರದ ಪೊಲೀಸ್ ನೇಮಕಾತಿಯಲ್ಲಿ ಮುಸ್ಲಿಮರಿಗೆ ಆದ್ಯತೆ ಕೊಡಬೇಕು. ಎಂವಿಎ ಸರ್ಕಾರ ರಚನೆಯಾದರೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸಬೇಕು. ಪ್ರಚೋದನಕಾರಿ ಹೇಳಿಕೆ ನೀಡಿ ಬಂಧಿತರಾಗಿರುವ ಮೌಲಾನ ಸಲ್ಮಾನ್ ಅಝೇರಿ ಅವರನ್ನು ಬಿಡುಗಡೆ ಮಾಡಬೇಕು. ಬಿಜೆಪಿ ನಾಯಕ ನಿತೇಶ್ ರಾಣೆ ಮತ್ತು ರಾಮಗಿರಿ ಮಹಾರಾಜ್ ಅವರನ್ನು ಕೂಡಲೇ ಬಂಧಿಸಬೇಕು ಎಂಬಿತ್ಯಾದಿ ಆಘಾತಕಾರಿ ಷರತ್ತುಗಳನ್ನು ಉಲೇಮಾ ಬೋರ್ಡ್‌ ಮುಂದಿಟ್ಟಿದೆ.
2012ರಿಂದ 2024ರವರೆಗೆ ಗಲಭೆ ಪ್ರಕರಣಗಳಲ್ಲಿ ಬಂಧಿತರಾಗಿರುವ ಮುಸ್ಲಿಮರನ್ನು ಬಿಡುಗಡೆ ಮಾಡಬೇಕು. ಮಹಾರಾಷ್ಟ್ರದ ಮಸೀದಿಗಳ ಇಮಾಮರು ಮತ್ತು ಮೌಲಾನಗಳಿಗೆ ಮಾಸಿಕ 15,000 ರೂ. ಸಂಭಾವನೆ ನೀಡಬೇಕು. ಅಧಿಕಾರಕ್ಕೆ ಬಂದ ಬಳಿಕ ಅಖಿಲ ಭಾರತ ಉಲೇಮಾ ಮಂಡಳಿಯ ಮುಫ್ತಿ ಮೌಲಾನ, ಅಲೀಮ್ ಹಫೀಜ್ ಮಸೀದಿಯ ಇಮಾಮರನ್ನು ಸರ್ಕಾರದ ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯದ 50 ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು.
ಮಹಾರಾಷ್ಟ್ರ ವಕ್ಫ್ ಬೋರ್ಡ್​ನಲ್ಲಿ 500 ಉದ್ಯೋಗಿಗಳ ನೇಮಕಾತಿ ಆಗಬೇಕು. ಪ್ರವಾದಿ ಮೊಹಮ್ಮದ್ ಅವರನ್ನು ಅವಹೇಳನ ಮಾಡುವ ಜನರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮಹಾರಾಷ್ಟ್ರದ 48 ಜಿಲ್ಲೆಗಳಲ್ಲಿ ಎಂವಿಎ ಪರವಾಗಿ ಪ್ರಚಾರ ಮಾಡಲು ಉಲೇಮಾ ಮಂಡಳಿಗೆ ಅಗತ್ಯವಾಗಿರುವ ಸಾಮಗ್ರಿಗಳನ್ನು ಒದಗಿಸಬೇಕು ಎಂಬ ಷರತ್ತುಗಳು ಪತ್ರದಲ್ಲಿವೆ.
ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಹೊರಬರಲಿದೆ. ಮಹಾರಾಷ್ಟ್ರದಲ್ಲಿ ಒಟ್ಟು 11.24 ಕೋಟಿ ಜನಸಂಖ್ಯೆ ಇದ್ದು ಮುಸ್ಲಿಮರ ಪ್ರಮಾಣ ಶೇ. 11.56ರಷ್ಟಿದೆ. ಕುತೂಹಲ ಎಂದರೆ ಅಲ್ಲಿನ 288 ವಿಧಾನಸಭಾ ಕ್ಷೇತ್ರಗಳ ಪೈಕಿ 38ರಲ್ಲಿ ಮುಸ್ಲಿಮ್ ಮತದಾರರ ಸಂಖ್ಯೆ ಶೇ.20ರಷ್ಟಿದೆ. 9 ಕ್ಷೇತ್ರದಲ್ಲಿ ಇವರ ಬಾಹುಳ್ಯ ಶೇ. 40ಕ್ಕಿಂತಲೂ ಹೆಚ್ಚಿದೆ. ಮುಂಬೈನ 10 ಕ್ಷೇತ್ರಗಳಲ್ಲಿ ಶೇ. 25ಕ್ಕೂ ಹೆಚ್ಚು ಮುಸ್ಲಿಮರಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಮುಸ್ಲಿಮರೇ ನಿರ್ಣಾಯಕರಾಗಿದ್ದಾರೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top