ಮಂಗಳೂರು-ಬೆಂಗಳೂರು ಮಧ್ಯೆ ನಿರ್ಮಾಣವಾಗಲಿದೆ ಎಕ್ಸ್‌ಪ್ರೆಸ್‌ ವೇ

ಪ್ರಯಾಣ ಸಮಯ 3-4 ತಾಸಿಗಿಳಿಸಲು ಹೈಸ್ಪೀಡ್‌ ರೋಡ್‌ ನಿರ್ಮಾಣದ ಪ್ರಸ್ತಾವ

ಬೆಂಗಳೂರು : ಎಲ್ಲ ಅಂದುಕೊಂಡಂತೆ ನಡೆದರೆ ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಯಾಣ ಸುಲಭವಾಗಲಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮಾದರಿಯಲ್ಲಿ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಯೋಜನೆಯ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಿದೆ.
ಬೆಂಗಳೂರು-ಮಂಗಳೂರು ಮಧ್ಯೆ ಸುಮಾರು 400 ಕಿ.ಮೀ. ಅಂತರವಿದೆ. ಬಸ್‌ನಲ್ಲಿ ಪ್ರಯಾಣಕ್ಕೆ 7-8 ತಾಸು ಸಮಯ ಬೇಕಾಗುತ್ತದೆ. ಈ ಸಮಯವನ್ನು ಕಡಿಮೆ ಮಾಡಲು ಈಗಾಗಲೇ ಕೇಂದ್ರ ಸರ್ಕಾರ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ವೇ ಕಾರಿಡಾರ್ ನಿರ್ಮಿಸಲು ಸಿದ್ಧತೆ ಮಾಡಿಕೊಂಡಿದೆ. ಇದರಿಂದ 3-4 ತಾಸಿನೊಳಗೆ ಬೆಂಗಳೂರಿನಿಂದ-ಮಂಗಳೂರು ತಲುಪಬಹುದು ಎಂದು ಅಂದಾಜಿಸಲಾಗಿದೆ. ಸಮಯ ಮತ್ತು ಇಂಧನ ಉಳಿಸುವ ನಿಟ್ಟಿನಲ್ಲಿ ಈ ಎಕ್ಸ್‌ಪ್ರೆಸ್‌ ವೇ ಸಹಕಾರಿಯಾಗಲಿದೆ.
ಡಿಪಿಆರ್ ತಯಾರಿಸಲು ಒಂಬತ್ತು ಕಂಪನಿಗಳು ಟೆಂಡರ್​ನಲ್ಲಿ ಭಾಗಿಯಾಗಿವೆ. ಜನವರಿ ವೇಳೆಗೆ ಟೆಂಡರ್ ಫೈನಲ್ ಆಗುವ ಸಾಧ್ಯತೆಗಳಿವೆ. ಇದರಿಂದ ಬೆಂಗಳೂರಿನಿಂದ ವಿದೇಶಕ್ಕೆ ಸಾಗಿಸುವ ಸಾಮಾಗ್ರಿಗಳನ್ನು ಸಾಗಿಸಲು ಸಹಾಯ ಆಗುತ್ತದೆ ಮತ್ತು ವಿದೇಶದಿಂದ ಭಾರತಕ್ಕೆ ಬರುವ ಇಂಧನ, ಗ್ಯಾಸ್, ಮೈನ್ಸ್ ಮತ್ತಿತರ ಸರಕುಗಳನ್ನು ಮಂಗಳೂರು ಬಂದರಿನ ಮೂಲಕ ಬೆಂಗಳೂರಿಗೆ ತರಲು ಸಹಾಯ ಆಗುತ್ತದೆ.
ಡಿಪಿಆರ್ ರೆಡಿ ಮಾಡಲು ಒಂಬತ್ತು ಕಂಪನಿಗಳು ಟೆಂಡರ್ ಸಲ್ಲಿಸಿವೆ. ಈ ಹೈ ಸ್ಪೀಡ್ ಕಾರಿಡಾರ್ ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಮಂಗಳೂರು ತಲುಪಲಿದೆ. ನಾಲ್ಕು ಅಥವಾ ಆರು ಲೈನ್ ರಸ್ತೆ ಮಾಡಲು ಯೋಜನೆ ಮಾಡಲಾಗಿದೆ. ಈ ಎಕ್ಸ್‌ಪ್ರೆಸ್ ವೇ 335 ಕಿಮೀ ವಿಸ್ತೀರ್ಣ ಇರಲಿದೆ. ಟೆಂಡರ್ ಪಡೆದುಕೊಳ್ಳುವ ಕಂಪನಿಗೆ ಡಿಪಿಆರ್ ವರದಿ ಸಲ್ಲಿಸಲು 540 ದಿನಗಳ ಅವಕಾಶ ನೀಡಲಾಗುತ್ತದೆ.
2028ರಲ್ಲಿ ಈ ಹೈ ಸ್ಪೀಡ್ ಕಾರಿಡಾರ್ ಯೋಜನೆಯ ಕೆಲಸ ಆರಂಭವಾಗಲಿದೆ ಅಂತ ಹೇಳಲಾಗುತ್ತಿದೆ. ಆದರೆ ಮಂಗಳೂರು-ಮಂಗಳೂರು ನಡುವೆ ರಸ್ತೆ ನಿರ್ಮಿಸಲು ಯಾವ ಕಡೆಯಿಂದ ಹೋದರೂ ಪಶ್ಚಿಮಘಟ್ಟವನ್ನು ಹಾದು ಹೋಗಲೇ ಬೇಕಾಗುತ್ತದೆ. ಘಟ್ಟದಲ್ಲಿರುವ ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಇದಕ್ಕೆ ಖಂಡಿತ ಪರಿಸರವಾದಿಗಳ ವಿರೋಧ ಎದುರಾಗುತ್ತದೆ. ಈ ಹಿಂದೆಯೂ ಬೆಂಗಳೂರು-ಮಂಗಳೂರು ನಡುವೆ ಸುಸಜ್ಜಿತ ರಸ್ತೆ ನಿರ್ಮಿಸುವ ಪ್ರಸ್ತಾವ ಬಂದು ಕಾರ್ಯಸಾಧ್ಯತೆಯ ಅಧ್ಯಯನ ಕೂಡ ನಡೆಸಲಾಗಿತ್ತು. ಆದರೆ ಪಶ್ಚಿಮಘಟ್ಟದಲ್ಲಿ ಯದ್ವಾತದ್ವಾ ಕಾಮಗಾರಿ ನಡೆಸುವುದರಿಂದ ಎದುರಾಗಬಹುದಾದ ಅಪಾಯವನ್ನು ಪರಿಗಣಿಸಿ ಕೈಬಿಡಲಾಗಿತ್ತು.
ನಿತ್ಯ ಬೆಂಗಳೂರು-ಮಂಗಳೂರು ಮಧ್ಯೆ ಖಾಸಗಿ ಬಸ್‌ಗಳ ಸಹಿತ ಸಾವಿರಾರು ವಾಹನಗಳು ಓಡಾಡುತ್ತವೆ. ಎಕ್ಸ್‌ಪ್ರೆಸ್‌ ಹೈವೆ ನಿರ್ಮಾಣವಾದರೆ ಇಂಧನ ಮತ್ತು ಸಮಯ ಬಹಳಷ್ಟು ಉಳಿತಾಯವಾಗಬಹುದು ಎಂದು ವಾಹನ ಮಾಲೀಕರು ಅಭಿಪ್ರಾಯ ವ್ಯಕ್ತಪಡುತ್ತಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top