ಹೈದರಾಬಾದ್: ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಲೇಜು ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ 20 ದಿನ ಹೋಟೆಲ್ ರೂಮ್ನಲ್ಲಿ ಬಂಧನದಲ್ಲಿಟ್ಟ ಆಘಾತಕಾರಿ ಘಟನೆ ಹೈದರಾಬಾದ್ನಲ್ಲಿ ಸಂಭವಿಸಿದೆ. ಹೈದರಾಬಾದ್ನ ಮಹಿಳಾ ಪೊಲೀಸರು ಕೊನೆಗೂ ಯುವತಿಯನ್ನು ಬಂಧನದಿಂದ ರಕ್ಷಿಸಿದ್ದಾರೆ.
ಹೈದರಾಬಾದ್ ಪೊಲೀಸ್ ವಿಭಾಗದ ‘SHE’ ತಂಡ ವಿದ್ಯಾರ್ಥಿನಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. 19 ವರ್ಷದ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭೈಂಸಾ ಪಟ್ಟಣದ ವಿದ್ಯಾರ್ಥಿನಿಯ ಪೋಷಕರು ಹೈದರಾಬಾದ್ನ ‘SHE’ ಟೀಮ್ಗೆ ಮಗಳು ಕಿಡ್ನಾಪ್ ಆಗಿದ್ದಾಳೆ ಎಂದು ತಿಳಿಸಿದ್ದರು. ಅದರಂತೆ ತನಿಖೆ ನಡೆಸಿದಾಗ ಯುವತಿ ಹೋಟೆಲ್ ಕೊಠಡಿಯಲ್ಲಿ ಬಂಧಿಯಾಗಿರುವುದು ತಿಳಿದುಬಂದಿದೆ. ಆರೋಪಿ ಬೆದರಿಕೆ ಹಾಕಿ ಹೈದರಾಬಾದ್ಗೆ ಬರುವಂತೆ ಒತ್ತಾಯಿಸಿದ್ದ, 20 ದಿನಗಳ ಕಾಲ ಹೋಟೆಲ್ ಕೊಠಡಿಯಲ್ಲಿ ಬೀಗ ಹಾಕಿ ಕೂರಿಸಿದ್ದ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.
ಆಕೆ ತನ್ನ ಮೊಬೈಲ್ ಕಾಡಿಬೇಡಿ ಪಡೆದುಕೊಂಡು ಕೂಡಲೇ ಇನ್ಸ್ಟಂಟ್ ಮೆಸೇಜಿಂಗ್ ಆ್ಯಪ್ ಮೂಲಕ ಪೋಷಕರಿಗೆ ಸಂದೇಶ ಕಳುಹಿಸಿದ್ದಳು. ತಕ್ಷಣವೇ ಪೊಲೀಸರು ಸ್ಥಳವನ್ನು ಪತ್ತೆ ಹಚ್ಚಿದ್ದಾರೆ.
ನಾರಾಯಣಗುಡಾದಲ್ಲಿ ಬೀಗ ಹಾಕಲಾದ ಹೋಟೆಲ್ ಕೋಣೆಯಲ್ಲಿ ಬಾಲಕಿಯನ್ನು ಪತ್ತೆಹಚ್ಚಿ, ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.
























