ಮಂಗಳೂರಿನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಹೇಳಿಕೆ
ಪುತ್ತೂರು : ಫೆ.10 ರಿಂದ ಮೂರು ದಿನಗಳ ಕಾಲ ಕ್ಯಾಂಪ್ಕೋ ಹಾಗೂ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವತಿಯಿಂದ ನಡೆಯುವ ಕೃಷಿ ಯಂತ್ರಮೇಳಕ್ಕೆ ಅಮಿತ್ ಷಾ ಅವರು ಬರಲಿದ್ದು, ಅವರನ್ನು ದೊಡ್ಡ ಮಟ್ಟದಲ್ಲಿ ಸ್ವಾಗತಿಸಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅವರು ಪುತ್ತೂರಿನಲ್ಲಿ ನಡೆಯುವ ಕೃಷಿಯಂತ್ರ ಮೇಳದ ಕುರಿತು ಮಂಗಳೂರಿನಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಅಮಿತ್‌ಷಾ ಅವರು ದೇಶದ ಮೊದಲ ಸಹಕಾರಿ ಸಚಿವರು. ಈ ನಿಟ್ಟಿನಲ್ಲಿ ಅವರನ್ನು ಬರಬೇಕು ಎಂದು ವಿನಂತಿ ಮಾಡಿದ್ದಾರೆ. ಆದ್ದರಿಂದ ಅವರು ಬರಲಿದ್ದಾರೆ ಎಂದು ಹೇಳಿದರು.
ಅಂತರಾಜ್ಯ ಸಹಕಾರಿ ಕ್ಷೇತ್ರದಲ್ಲಿ ಅತೀ ದೊಡ್ಡದಾದ ಸಂಸ್ಥೆ ಕ್ಯಾಂಪ್ಕೋ. ಅಲ್ಲದೆ ಒಂದು ಕಾಲಘಟ್ಟದಲ್ಲಿ ಏಷ್ಯಾದಲ್ಲೇ ಅತೀ ದೊಡ್ಡ ಚಾಕಲೇಟ್ ಫ್ಯಾಕ್ಟರಿಯಾಗಿ ಕ್ಯಾಂಪ್ಕೋ ಬೆಳೆದಿದೆ. ವಾರಣಾಸಿ ಸುಬ್ರಾಯ ಭಟ್ ನೇತೃತ್ವದಲ್ಲಿ ಆರಂಭಗೊಂಡ ಸಂಸ್ಥೆ ಕಿಶೋರ್ ಕೊಡ್ಗಿ ಅವರ ನೇತೃತ್ವದಲ್ಲಿ ಸಾಧನೆ ಮಾಡಿದ ಸಂಸ್ಥೆಯಾಗಿದೆ. ಇದೀಗ 50ನೇ ವರ್ಷದ ಸುವರ್ಣ ಸಂಭ್ರಮ ಹೊಸ್ತಿಲಲ್ಲಿದೆ. ಇದೀಗ ಕ್ಯಾಂಪ್ಕೋ ಸಂಸ್ಥೆಯಿಂದ ಕೃಷಿ ಯಂತ್ರಮೇಳ ಏರ್ಪಡಿಸಲಾಗಿದ್ದು, ಪೂರ್ವ ತಯಾರಿಯಾಗಿ ಮೂರು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಕೃಷಿಯ ಬಗ್ಗೆ ಅಧ್ಯಯನ ಮಾಡುವ ಜತೆಗೆ ಕೃಷಿಯ ಕುರಿತು ಉದ್ಯಮ ಮಾಡುವ ಯುವಜನರಿಗೆ ಅವಕಾಶಗಳು ಸಿಗಬೇಕು. ಅಲ್ಲದೆ ಕೃಷಿಕರಿಗೆ ಕೃಷಿ ಯಂತ್ರೋಪಕರಣದ ಕುರಿತು ಮಾಹಿತಿ ಸಿಗಬೇಕು ಎಂಬ ದೃಷ್ಟಿಯಿಂದ ಈ ಕೃಷಿ ಯಂತ್ರ ಮೇಳ ಏರ್ಪಡಿಸಲಾಗಿದೆ ಎಂದರು.
























