ಶಾಸಕ ಸಂಜೀವ ಮಠಂದೂರು ಮುತುವರ್ಜಿಯಲ್ಲಿ ನಿರ್ಮಾಣಗೊಂಡ 1.50 ಕೋಟಿ ರೂ. ವೆಚ್ಚದ 3 ಕಟ್ಟಡಗಳು
ಪುತ್ತೂರು, ಉಪ್ಪಿನಂಗಡಿ, ವಿಟ್ಲ ಹೋಬಳಿಯ ರೈತರ ಉಪಯೋಗಕ್ಕಾಗಿ ಸಿದ್ಧವಾಗಿದೆ ನೂತನ ಕಟ್ಟಡ
ಪುತ್ತೂರು: ರೈತರಿಗೆ, ಕೃಷಿಕರಿಗಾಗಿ ಅದೆಷ್ಟು ಸವಲತ್ತುಗಳನ್ನು ನೀಡುತ್ತಿದೆ ಸರ್ಕಾರ. ಆದರೆ ಆ ಯೋಜನೆಗಳನ್ನು ರೈತರು ಪಡೆದುಕೊಳ್ಳದೇ ಇದ್ದರೆ, ಕೇಂದ್ರ ಇದ್ದೇನು ಪ್ರಯೋಜನ. ಸವಲತ್ತು, ಯೋಜನೆಗಳ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕಾದರೆ ಮೂಲಸೌಕರ್ಯ ತೀರಾ ಅವಶ್ಯಕತೆ. ಇದಕ್ಕಾಗಿ ಶಾಸಕ ಸಂಜೀವ ಮಠಂದೂರು ಅವರು ಮುತುವರ್ಜಿ ವಹಿಸಿ, ಪುತ್ತೂರು ವಿಧಾನಸಭಾ ಕ್ಷೇತ್ರದ 3 ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಿಗೆ ನೂತನ ಕಟ್ಟಡವನ್ನು ತರಿಸುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ರೈತರಿಗೆ ವರದಾನವಾಗುವುದರಲ್ಲಿ ಎರಡು ಮಾತಿಲ್ಲ. ತಲಾ 50 ಲಕ್ಷ ರೂ.ನಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ 3 ಕೇಂದ್ರಗಳ ನೂತನ ಕಟ್ಟಡಕ್ಕೆ 1.50 ಕೋಟಿ ರೂ.ವನ್ನು ಶಾಸಕರು ಮಂಜೂರುಗೊಳಿಸಿದ್ದಾರೆ. ಪುತ್ತೂರು ಹೋಬಳಿಗೆ ದರ್ಬೆಯಲ್ಲಿ, ಉಪ್ಪಿನಂಗಡಿ ಹೋಬಳಿಗೆ ಉಪ್ಪಿನಂಗಡಿಯಲ್ಲಿ ಹಾಗೂ ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿಗೆ ವಿಟ್ಲದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಹೊಸ ಕಟ್ಟಡಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಎದುರು ನೋಡುತ್ತಿದೆ.

ಬಾಡಿಗೆ ಕಟ್ಟಡದಿಂದ ಸ್ವಂತಕ್ಕೆ:
ಪುತ್ತೂರು, ಉಪ್ಪಿನಂಗಡಿ ಹಾಗೂ ವಿಟ್ಲದ 3 ಹೋಬಳಿ ಕೇಂದ್ರಗಳು ಇದುವರೆಗೆ ಬಾಡಿಗೆ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿತ್ತು. ಇದೀಗ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ಸಿದ್ಧವಾಗಿದೆ. ಈ ಹೊಸ ಕಟ್ಟಡದಿಂದಾಗಿ ಬಾಡಿಗೆ ನೀಡುವುದು ಉಳಿತಾಯವಾಗಲಿದೆ. ಸಾಕಷ್ಟು ಸ್ಥಳಾವಕಾಶ ಲಭ್ಯವಾಗಲಿದೆ. ಕೃಷಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸುಲಭವಾಗಲಿದೆ.
ಬಾಡಿಗೆ ಕಟ್ಟಡದ ಸಂಕಷ್ಟಗಳು:
ರೈತ ಸಂಪರ್ಕ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿದ್ದಾಗ ಸಾಕಷ್ಟು ಸಮಸ್ಯೆಗಳನ್ನು ರೈತರು ಎದುರಿಸಬೇಕಾಗಿತ್ತು. ಎಷ್ಟೋ ಸಂದರ್ಭದಲ್ಲಿ ಸವಲತ್ತುಗಳನ್ನು ವಿತರಿಸಲು ಸ್ಥಳಾವಕಾಶದ ಕೊರತೆಯಾಗಿ, ರಸ್ತೆಯಲ್ಲೇ ನಿಂತು ಸರ್ಕಾರದ ಸೌಲಭ್ಯಗಳನ್ನು ವಿತರಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಗೋಡೌನ್ ಇಲ್ಲದೇ, ಬಂದ ಸವಲತ್ತುಗಳನ್ನು ಇನ್ನೇಲ್ಲೋ ದಾಸ್ತಾನು ಇಡಬೇಕಾದ ಸ್ಥಿತಿಯಿತ್ತು. ರೈತರಿಗೆ ಮಾಹಿತಿ ನೀಡಲು ಸರಿಯಾದ ಜಾಗವೇ ಇಲ್ಲವಾಗಿತ್ತು. ಇಂತಹ ಹಲವಾರು ಸಮಸ್ಯೆಗಳು ಮುಂದೆ ಇರದು.
ಹೊಸ ಕಟ್ಟಡ ಹೀಗಿದೆ:
ರೈತರ ಸೇವೆಗೆಂದೇ ತಳಮಟ್ಟದಲ್ಲಿರುವ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳ ನೂತನ ಕಟ್ಟಡದಿಂದ ಹಲವಾರು ಪ್ರಯೋಜನಗಳು ರೈತರಿಗೆ ಸಿಗಲಿದೆ. ಅದಕ್ಕಾಗಿ, ಕಟ್ಟಡವನ್ನು ಸ್ವಂತ ಜಾಗದಲ್ಲಿ ಸಾಕಷ್ಟು ವಿಸ್ತಾರವಾಗಿ ನಿರ್ಮಿಸಲಾಗಿದೆ. ರೈತರು ಬರುತ್ತಿದ್ದಂತೆ ಎದುರುಗೊಳ್ಳುವುದು ಕೌಂಟರ್. ನಂತರ ಅಧಿಕಾರಿಗಳ ಚೇಂಬರ್, ಕಂಪ್ಯೂಟರ್ ಕೊಠಡಿಗಳು. ರೈತರಿಗೆ ಮಾಹಿತಿ ನೀಡಲೆಂದೇ ಸುವ್ಯವಸ್ಥಿತ ಸಭಾಂಗಣವನ್ನು ನಿರ್ಮಿಸಲಾಗಿದೆ. ಮಾತ್ರವಲ್ಲ, ರೈತರಿಗೆಂದು ಸರಕಾರ ನೀಡುವ ಸವಲತ್ತುಗಳನ್ನು ದಾಸ್ತಾನಿಡಲು ಭದ್ರವಾದ ಗೋಡೌನ್ ನಿರ್ಮಿಸಲಾಗಿದೆ.
























