ರೈತ ಸಂಘ, ಹಸಿರು ಸೇನೆ ವತಿಯಿಂದ ಉಗ್ರ ಹೋರಾಟದ ಎಚ್ಚರಿಕೆ
ಪುತ್ತೂರು : ಅರಣ್ಯ ಇಲಾಖೆ ಹಾಗೂ ಕೆ.ಸಿ.ಡಿ.ಸಿ ಇಲಾಖೆಯವರು ವಿನಃ ಕಾರಣ ರೈತರ ಜಮೀನುಗಳನ್ನು ತಮ್ಮದೆಂದು ಅತಿಕ್ರಮಿಸುವ ಮೂಲಕ ರೈತಾಪಿ ವರ್ಗಕ್ಕೆ ತೊಂದರೆ ಉಂಟು ಮಾಡುವುತ್ತಿದ್ದು, ಕರ್ನಾಟಕ ರಾಜ್ಯ ರೈತಸಂಘ, ಹಸಿರುಸೇನೆ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಭಟ್ ಪಾದೆಕಲ್ಲು ಎಚ್ಚರಿಕೆ ನೀಡಿದ್ದಾರೆ.ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅರಣ್ಯ ಇಲಾಖೆ ಹಾಗೂ ಕೆಸಿಡಿಸಿ ರೈತರು ಹಲವಾರು ವರ್ಷಗಳಿಂದ ಬದುಕಟ್ಟಿಕೊಳ್ಳಲು ತಮ್ಮ ಜಮೀನಿನಲ್ಲಿ ಕೃಷಿ, ಇನ್ನಿತರ ಕಾಯಕವನ್ನು ಮಾಡುತ್ತಾ ಬಂದಿದ್ದು, ಈ ಕುರಿತು ರೈತರಲ್ಲಿ ದಾಖಲೆಗಳಿವೆ. ಆದರೆ ಆರ್.ಟಿ.ಸಿ, ಇನ್ನಿತರ ಯಾವುದೇ ದಾಖಲೆಗಳಿಲ್ಲದೆ ತಮ್ಮದೆಂದು ದರ್ಪ ದಿಂದ ಸರಕಾರದ ನೀತಿ ಉಲ್ಲಂಘನೆ ಮಾಡಿ ಏಕಾಏಕಿ ಜಮೀನು ಅತಿಕ್ರಮಣ ಮಾಡುತ್ತಿರುವ ಕುರಿತು ಸಂಘಕ್ಕೆ ದೂರುಗಳು ಬರುತ್ತಾ ಇದೆ.
ಅರಣ್ಯ ಹಾಗೂ ಕೆಸಿಡಿಸಿ ಇಲಾಖೆ ಪ್ರಜಾಸತ್ತಾತ್ಮಕ ಅಡಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ ಅವರು, ಅವರ ಹಕ್ಕುಗಳನ್ನು ಪಡೆಯಲು ರೈತಾಪಿ ವರ್ಗದ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವುದು ಸರಿಯಲ್ಲ. ಈಗಾಗಲೇ ಕೆಲವು ಕಡೆಗಳಲ್ಲಿ ಕೃಷಿಕರು ಮಾಡಿರುವ ಅಡಿಕೆ, ತೆಂಗು, ರಬ್ಬರ್ ಮುಂತಾದ ಕೃಷಿಗಳನ್ನು ನಾಡಪಡಿಸಲಾಗಿದ್ದು, ರೈತರು ನಷ್ಟಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ದ.ಕ.ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್, ಕಾರ್ಯದರ್ಶಿ ಇಬ್ರಾಹಿಂ ಕಲೀಲ್ ಪುಚ್ಚೆತ್ತಡ್ಕ, ಸವಣೂರು ವಲಯ ಅಧ್ಯಕ್ಷ ಯತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭರತ್ ರೈ ಉಪಸ್ಥಿತರಿದ್ದರು.
























