ಪುತ್ತೂರು: ಬಳ್ಳಿ ಆಯುರ್ ಗ್ರಾಮ-ಆಯುರ್ವೇದ ಆಸ್ಪತ್ರೆ, ಗೋ ಸೇವಾ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಆಶ್ರಯದಲ್ಲಿ ಗವ್ಯ ಆಯುರ್ವೇದ ಚರ್ಮರೋಗ ಚಿಕಿತ್ಸಾ ವಿಭಾಗದ ಉದ್ಘಾಟನಾ ಸಮಾರಂಭ ನೆಕ್ಕಿಲಾಡಿ ಗ್ರಾಮದ ಬಳ್ಳಿ ಆಯುರ್ ಗ್ರಾಮ ಮೂಲಿಕಾವನದಲ್ಲಿ ನಡೆಯಿತು.
ಗೋ ಸೇವಾ ಗತಿವಿಧಿ ಪಂಚಗವ್ಯ ಮನುಷ್ಯ ಚಿಕಿತ್ಸೆ ಆಯಾಮ ವಿಷಯದ ಅಖಿಲ ಭಾರತ ಪ್ರಮುಖ ಗುಜರಾತ್ ಜಾಮ್ ನಗರದ ಡಾ.ಹಿತೇಶ್ ಜಾನಿ ಸಮಾರಂಭ ಉದ್ಘಾಟಿಸಿ ಶುಭ ಹಾರೈಸಿದರು.
ಆಮೇರಿಕಾದ ಶ್ರೀಕೃಷ್ಣ ವೃಂದಾವನದ ಪ್ರಮುಖ ಅರ್ಚಕ ಯೋಗೀಂದ್ರ ಭಟ್ ಉಳಿ ಮಾತನಾಡಿ, ಸಹಜತೆ ಮಾನವ ಧರ್ಮ, ಗೋವಿನೊಂದಿಗೆ ನಾವು ಸಹಜ ಜೀವನವನ್ನು ನಡೆಸಬೇಕೆಂದು ಕರೆ ನೀಡಿದರು.
ಉಪ್ಪಿನಂಗಡಿ ಭಟ್ಸ್ ನರ್ಸಿಂಗ್ ಹೋಂನ ಡಾ.ಕೆ.ಜಿ ಭಟ್ ಮಾತನಾಡಿ, ಪಂಚಗವ್ಯದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಸಸ್ಯ ತಳಿ ಸಂರಕ್ಷಕ ಕೃಷಿಋಷಿ ಬಿ.ಕೆ ದೇವರಾವ್ ಅವರನ್ನು ಗೌರವಿಸಲಾಯಿತು. ಬಳ್ಳಿ ಪ್ರತಿಷ್ಠಾನ 34 ನೆಕ್ಕಿಲಾಡಿಯ ಐರಿನ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಗವ್ಯ ಆಯುರ್ವೇದ ಚರ್ಮರೋಗ ಹಾಗೂ ಕ್ಯಾನ್ಸರ್ ತಜ್ಞ ಡಾ.ಡಿ.ಪಿ ರಮೇಶ್ ಉಪಸ್ಥಿತರಿದ್ದರು. ಗೋ ಸೇವಾ ಗತಿವಿಧಿಯ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರವೀಣ ಸರಳಾಯ ವಂದಿಸಿದರು.
ಬಳಿಕ ಉಪ್ಪಿನಂಗಡಿ ಭಟ್ ನರ್ಸಿಂಗ್ ಹೋಂನ ಜೊಸ್ಸಿಸ್ ಆಯುರ್ ಕೇರ್ ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ವಿಶೇಷ ಚರ್ಮರೋಗ ತಪಾಸಣಾ ಶಿಬಿರ ಜರಗಿತು. ಸುಮಾರು 30 ಮಂದಿ ಫಲಾನುಭವಿಗಳು ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಪ್ರತಿ ತಿಂಗಳ ಮೊದಲನೇ ವಾರದಲ್ಲಿ ಈ ಶಿಬಿರವು ನಿರಂತರವಾಗಿ ನಡೆಯುವುದೆಂದು ಬಳ್ಳಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಸುಪ್ರೀತ್ ಲೋಬೊ, ಕೋಶಾಧಿಕಾರಿ ಡಾ.ಶೆನಿ ಪಾಯಿಸ್ ರವರು ತಿಳಿಸಿದ್ದಾರೆ.
























