ಪುತ್ತೂರು: ದಶಮಾನೋತ್ಸವ ಹೊಸ್ತಿಲಲ್ಲಿರುವ ಬಪ್ಪಳಿಗೆ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ‘ದಶಾಂಬಿಕೋತ್ಸವ’ ಕಾರ್ಯಕ್ರಮದ ಅಂಗವಾಗಿ ‘ಅಂತರ್ಮನಸ್ಸಿನ ವಿಸ್ಮಯ ಶಕ್ತಿಗಳ’ ಕುರಿತು ವಿಶೇಷ ಕಾರ್ಯಕ್ರಮ ಡಿ. 16 ರಂದು ಹಮ್ಮಿಕೊಳ್ಳಲಾಗಿದೆ ಎಂದು ದಶಾಂಬಿಕೋತ್ಸವ ಸಮಿತಿ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕಜೆ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಇಂತಹಾ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಸಮ್ಮೋಹಿನಿ ತಜ್ಞ, ಕುಂಡಲಿನಿ ಯೋಗ ಗುರು ಬೆಂಗಳೂರಿನ ಡಾ.ರಾಮಚಂದ್ರ ಗುರೂಜಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಡಾ. ರಾಮಚಂದ್ರ ಗುರೂಜಿಯವರು ಅಂತರಾಷ್ಟ್ರೀಯ ಪ್ರಸಿದ್ಧ ಆಧ್ಯಾತ್ಮಿಕ ಗುರುಗಳಾಗಿದ್ದು, ಮನಃಶಾಸ್ತ್ರೀಯ ಆಧ್ಯಾತ್ಮಿಕ ಹಿಪ್ನೋಥೆರಪಿ, ಹೀಲಿಂಗ್ ಮತ್ತು ಹನುಮಾನ್ ಚಾಲೀಸಾದಲ್ಲಿ ಸಿದ್ಧಪುರುಷರೆನಿಸಿದ್ದಾರೆ. ಇದುವರೆಗೆ ಸುಮಾರು 10 ಸಾವಿರಕ್ಕೂ ಮಿಕ್ಕಿ ಜನರಿಗೆ ಪುನರ್ ಜನ್ಮ ಹಿನ್ನೋಟಗಳನ್ನು ನಡೆಸಿಕೊಟ್ಟಿದ್ದಾರೆ ಎಂದ ಅವರು, ನಮ್ಮ ಮಕ್ಕಳು ಸಂಸ್ಕಾರಯುತವಾಗಿ, ಸಂಸ್ಕೃತಿಯ ರಾಯಭಾರಿಗಳಾಗಬೇಕು ಎಂಬುದು ಎಲ್ಲರ ಆಶಯ. ಈ ನಿಟ್ಟಿನಲ್ಲಿ ಮಕ್ಕಳ ಹೆತ್ತವರು ಹಾಗೂ ಸಾರ್ವಜನಿಕರಿಗೆ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಮಕ್ಕಳು ನಮ್ಮನ್ನು ಅನುಸರಿಸುತ್ತಾರೆ ಎಂಬ ಮಾರ್ಗದರ್ಶನವನ್ನು ಹೆತ್ತವರು ಗುರೂಜಿಯವರಿಂದ ಪಡೆದುಕೊಳ್ಳಲು ಈ ಕಾರ್ಯಕ್ರಮ ಪೂರಕವಾಗಲಿದೆ. ಹಾಗೆಯೇ ನಮ್ಮೊಳಗಿನ ವಿಸ್ಮಯ ಶಕ್ತಿಗಳೇನು, ಸಾಧನೆಯೆಡೆಗೆ ಹೆಜ್ಜೆ ಇಡುವಲ್ಲಿ ಅನುಸರಿಸಬೇಕಾದ ಪಥಗಳು ಮುಂತಾದ ಸಂಗತಿಗಳ ಬಗ್ಗೆ ಗುರೂಜಿಯವರು ಬೆಳಕು ಚೆಲ್ಲಲಿದ್ದಾರೆ ಎಂದು ಅವರು ತಿಳಿಸಿದರು.
ದಶಾಂಬಿಕೋತ್ಸವದ ಅಂಗವಾಗಿ ಒಂದು ವರ್ಷಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿ 10 ಆಯಾಮಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಂಬಿಕಾ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಟ್ರಸ್ಟಿ ರಾಜಶ್ರೀ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್, ಸೀಮಾ ನಾಗರಾಜ್, ಪ್ರಾಂಶುಪಾಲ ರಾಕೇಶ್ ಕಮ್ಮಜೆ ಉಪಸ್ಥಿತರಿದ್ದರು.
























