ನಿಂತಿಕಲ್ಲು: ಸೌಜನ್ಯ ಕೊಲೆಯಾಗಿ 11 ವರ್ಷ ಕಳೆದರೂ ನೈಜ ಕೊಲೆ ಅಪರಾಧಿಗಳ ಪತ್ತೆಗೆ ಪ್ರತಿಭಟನೆ, ಹಕ್ಕೊತ್ತಾಯಗಳು ದಿನದಿಂದ ದಿನಕ್ಕೆ ಕಾವೇರುತ್ತಿದೆ.
ದ.ಕ.ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳಲ್ಲಿರುವ ಸಂಘ ಸಂಸ್ಥೆಗಳು, ಸಮುದಾಯಗಳು ನೈಜ ಆರೋಪಿಗಳ ಪತ್ತೆಗಾಗಿ ದೈವ-ದೇವಸ್ಥಾನಗಳಲ್ಲಿ, ಮಠ-ಮಂದಿರಗಳಲ್ಲಿ ಪ್ರಾರ್ಥನೆಗಳನ್ನು ನಡೆಸುತ್ತಿರುವುದಲ್ಲದೆ, ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಮೌನ ಮೆರವಣಿಗೆ, ವಾಹನ ಜಾಥಾ, ಪ್ರತಿಭಟನೆಗಳನ್ನು ಹಮ್ಮಿಕೊಳ‍್ಳುತ್ತಿದೆ. ಸಮುದಾಯದವರು ತಾಲೂಕು ಮಟ್ಟದಿಂದ ತೊಡಗಿ ಜಿಲ್ಲಾ ಮಟ್ಟದ ತನಕ ಹಕ್ಕೊತ್ತಾಯದ ಸಭೆಗಳನ್ನು ನಡೆಸುವ ಮೂಲಕ ಮುಂದಿನ ನಡೆಯ ಕುರಿತು ಚರ್ಚೆಗಳನ್ನು ನಡೆಸುತ್ತಿದೆ.
ವಿಶೇಷವೆಂದರೆ ಇದೀಗ ರಾಜಕೀಯ ನಾಯಕರುಗಳು ನೈಜ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂಬ ನಿಟ್ಟಿನಲ್ಲಿ ದೇವಸ್ಥಾನಗಳಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೌಜನ್ಯ ತಾಯಿ ಕುಸುಮಾವತಿ ಸಹಿತ ಅವರ ಕುಟುಂಬದವರು ಪ್ರತಿಭಟನೆಗಳಲ್ಲಿ ಪಾಲ್ಗೊಂಡು ನ್ಯಾಯಕ್ಕಾಗಿ ಪ್ರತಿಭಟನಾಕಾರರೊಂದಿಗೆ ಕೈಜೋಡಿಸುವ ಮೂಲಕ ಪ್ರತಿಭಟನೆಯ ಕಾವು ಮತ್ತಷ್ಟು ಜಾಸ್ತಿಯಾದಂತಾಗಿದೆ.
ಮಂಗಳವಾರ ನಿಂತಿಕಲ್ಲಿನಿಂದ ಸುಳ್ಯದ ತನಕ ಸಂಘ ಸಂಸ್ಥೆಗಳು ಸಹಿತ ಸಮಾನ ಮನಸ್ಕರಿಂದ ನಡೆಯುತ್ತಿರುವ ವಾಹನ ಜಾಥಾ, ಪ್ರತಿಭಟನೆಯಲ್ಲಿ ಬೃಹತ್ ಜನಸಮೂಹವೇ ಸೇರಿದೆ. ದೊಡ್ಡ ಮಟ್ಟದಲ್ಲಿ ಘೊಷಣೆಗಳು ಕೂಗುವ ಮೂಲಕ ವಾಹನ ಜಾಥಾ ಸುಳ್ಯಕ್ಕೆ ತೆರಳಿದೆ. ವಿವಿಧ ಮಾಧ್ಯಮಗಳು ವರದಿ ಬಿತ್ತರಿಸಲು ನಿಂತಿಕಲ್ಲಿಗೆ ದೌಡಾಯಿಸಿದೆ. ಸೌಜನ್ಯ ತಾಯಿ ಕುಸುಮಾವತಿ ಸಹಿತ ಅವರ ಕುಟುಂಬದವರು ಪಾಲ್ಗೊಳ್ಳುತ್ತಿದ್ದಾರೆ. ಪ್ರತಿಭಟನೆ ವಿಚಾರದಲ್ಲಿ ಕೊಲೆಯಾದ ದಿನಗಳಿಂದಲೇ ಮುಂಚೂಣಿಯಲ್ಲಿದ್ದ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಸಮುದಾಯದ ಪ್ರಮುಖರು, ಸಂಘ ಸಂಸ್ಥೆಗಳ ಪ್ರಮುಖರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.
ಅಂತೂ ಸೌಜನ್ಯ ಕೊಲೆ ಪ್ರಕರಣದ ನೈಜ ಆರೋಪಿಗಳ ಪತ್ತೆಗಾಗಿ ನಡೆಸುತ್ತಿರುವ ಈ ಹೋರಾಟ ಎಲ್ಲಿ ತನಕ ತಲುಪಲಿದೆ, ನೈಜ ಆರೋಪಿಗಳು ಪತ್ತೆಯಾಗುವಲ್ಲಿ ತನಕ ತಮ್ಮ ಹೋರಾಟಗಳನ್ನು ಮುಂದುವರಿಸಲಿವೆಯೇ ಎಂದು ಕಾದು ನೋಡಬೇಕಾಗಿದೆ.
























