ವೈರಸ್ ಸೋಂಕಿನ ಶಂಕೆಯಲ್ಲಿ 7 ಸಿಂಹಗಳು ಕ್ವಾರಂಟೈನ್
ಗಾಂಧಿನಗರ: ಏಷ್ಯಾಟಿಕ್ ಸಿಂಹಗಳ ಆವಾಸಸ್ಥಾನವೆಂದೇ ಖ್ಯಾತಿ ಪಡೆದಿರುವ ಗಿರ್ ಅರಣ್ಯ ಪ್ರದೇಶದಲ್ಲಿ 7 ಸಿಂಹಗಳ ಸರಣಿ ಸಾವು ಸಂಭವಿಸಿದೆ. ಗುಜರಾತ್ನ ಗಿರ್ ಕಾಡಿನಲ್ಲಿ ಸಿಂಹಗಳ ನಿರಂತರ ಸಾವು ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದಲ್ಲಿ ಭಾರಿ ಕಳವಳ ಹುಟ್ಟುಹಾಕಿದೆ.
ಕಳೆದ ಕೆಲ ದಿನಗಳಲ್ಲಿ 7 ಸಿಂಹಗಳು ಸಾವನ್ನಪ್ಪಿದ್ದು, ನಿಗೂಢ ವೈರಸ್ನ ಆತಂಕ ಎದುರಾಗಿದೆ. ಇದರಿಂದಾಗಿ ಸಾವನ್ನಪ್ಪಿದ ಅರಣ್ಯ ವ್ಯಾಪ್ತಿಯಲ್ಲಿರುವ 17 ಸಿಂಹಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಪೈಕಿ 8 ಸಿಂಹಗಳಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿವೆ ಎಂದು ವರದಿಗಳು ತಿಳಿಸಿವೆ.
ಪರಿಸ್ಥಿತಿ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಪರಿಸ್ಥಿತಿಯನ್ನು ನಿಭಾಯಿಸಲು ಪರಿಶೀಲನಾ ಸಭೆ ನಡೆಸಿದ್ದಾರೆ. ಗಿರ್ ಗಧಾಡಾ ಮತ್ತು ಬಾಬಾರಿಯಾ ಪ್ರದೇಶಗಳ 10 ಕಿಲೋಮೀಟರ್ ವ್ಯಾಪ್ತಿಯೊಳಗಿನ ಎಲ್ಲ ಸಿಂಹಗಳನ್ನ ಸೂಕ್ಷ್ಮವಾಗಿ ಪರಿಶೀಲನೆಗೆ ಒಳಪಡಿಸಲು ಸೂಚಿಸಿದ್ದಾರೆ. ಈ ವೇಳೆ ಇಲ್ಲಿಯವರೆಗೆ ಯಾವುದೇ ಸಿಂಹಗಳಲ್ಲಿ ಗಂಭೀರ ಅನಾರೋಗ್ಯದ ಲಕ್ಷಣ ಕಾಣಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಈಗಾಗಲೇ ಸಿಂಹಗಳ ಮೇಲೆ ನಿಗಾ ವಹಿಸಲು ಹಾಗೂ ನಿತ್ಯ ಮೇಲ್ವಿಚಾರಣೆ ನಡೆಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಇದರೊಂದಿಗೆ ಬೇಸಿಗೆಯಲ್ಲಿ ಹರಡುವ ರೋಗಗಳನ್ನು ತಡೆಗಟ್ಟಲು 350ಕ್ಕೂ ಹೆಚ್ಚು ಸಿಂಹಗಳಿಗೆ ಡಿ-ಟಿಕ್ಕಿಂಗ್ ಮತ್ತು ಇತರ ಆರೋಗ್ಯ ತಪಾಸಣಾ ಕ್ರಮಗಳನ್ನ ಜಾತಿಗೊಳಿಸಲಾಗಿದೆ.
ನಿಗೂಢ ವೈರಸ್ ಆತಂಕದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆ 17 ಸಿಂಹಗಳನ್ನು ಕ್ವಾರಂಟೈನ್ ಮಾಡಿದೆ. ಈ ಪೈಕಿ 8 ಸಿಂಹಗಳಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಸೋಂಕಿತ ಸಿಂಹಗಳಿಗೆ ಚಿಕಿತ್ಸೆ ನೀಡಲು ಮತ್ತು ಮೇಲ್ವಿಚಾರಣೆ ಮಾಡಲು 12 ವೈದ್ಯರ ವಿಶೇಷ ತಂಡ ನಿರಂತರವಾಗಿ ಕೆಲಸ ಮಾಡುತ್ತಿದೆ. ಈ ತಂಡದಲ್ಲಿ ಜುನಾಗಢ ಪಶು ವೈದ್ಯಕೀಯ ಕಾಲೇಜಿನ ತಜ್ಞರೂ ಇದ್ದಾರೆ.
ಇದರೊಂದಿಗೆ ಸುಮಾರು 250 ಅರಣ್ಯ ಸಿಬ್ಬಂದಿ ಸಿಂಹಗಳ ಮೇಲ್ವಿಚಾರಣೆ ನಡೆಸುವ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ ಜಾಮ್ನಗರ, ಸೂರತ್, ರಾಜ್ಕೋಟ್, ಕಛ್ ಮತ್ತು ಜುನಾಗಢದಿಂದ 20ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಗಿರ್ಗೆ ಕರೆಸಲಾಗಿದೆ. ಇವರಲ್ಲಿ ಆರ್ಎಫ್ಒಗಳು, ಅರಣ್ಯ ಸಿಬ್ಬಂದಿ ಮತ್ತು ಗಿರ್ ಪ್ರದೇಶದ ಮಾಜಿ ಅರಣ್ಯ ಸಿಬ್ಬಂದಿ ಹಾಗೂ ಅರಣ್ಯ ತಜ್ಞರು ಇದ್ದಾರೆ.
























