ಕೊಯಮತ್ತೂರು: ತನ್ನ ಪ್ರೀತಿಯನ್ನು ಯುವತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಆಕೆಯ ಮನೆಗೆ ಪಾಗಲ್ ಪ್ರೇಮಿ ಪೆಟ್ರೋಲ್ ಬಾಂಬ್ ಎಸೆದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಯುವಕ ಪೆಟ್ರೋಲ್ ಬಾಂಬ್ ಎಸೆದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ವೈರಲ್ ಆಗಿದೆ.
ತೊಂಡಾಮುತ್ತೂರು ಎಂಬಲ್ಲಿ ಯುವಕ ತನ್ನದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಆತನ ಪ್ರೀತಿಯನ್ನು ಯುವತಿ ಒಪ್ಪಿಕೊಂಡಿಲ್ಲ. ಇದೇ ಸಿಟ್ಟಿನಲ್ಲಿ ಯುವತಿಯ ಮನೆಗೆ ಆತ ಪೆಟ್ರೋಲ್ ಬಾಂಬ್ ಎಸೆದಿದ್ದಾನೆ. ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಬಾಂಬ್ ಬಿದ್ದ ತಕ್ಷಣವೇ ಯುವತಿಯ ಮನೆಯ ಮುಂದೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿ ಉರಿದಿದೆ.
ಘಟನೆ ನಡೆದ ತಕ್ಷಣವೇ ಮನೆಯವರು ಎಚ್ಚೆತ್ತುಕೊಂಡ ಪರಿಣಾಮ ದೊಡ್ಡ ಅನಾಹುತವೊಂದು ತಪ್ಪಿದೆ. ಯುವತಿಯ ಮನೆಯವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ತಲೆಮರೆಸಿಕೊಂಡಿರುವ ಆರೋಪಿಯನ್ನು ಪತ್ತೆ ಮಾಡಲು ಪೊಲೀಸರು ಬಲೆ ಬೀಸಿದ್ದಾರೆ.
























