ಪುತ್ತೂರು: ಕೃಷಿ ಸಲಕರಣೆಗಳ ವ್ಯಾಪಾರ ಮಳಿಗೆಯೊಂದು ಪರವಾನಗಿ ಪಡೆದು ಕಾರ್ಯ ನಿರ್ವಹಿಸಿದ್ದು, ಇಲ್ಲಿ ಮಾಡುವ ಯಂತ್ರೋಪಕರಣಗಳ ರಿಪೇರಿಯಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿ ದೂರು ನೀಡಲಾಗಿದ್ದು, ಕೋರ್ಟ್ ಆದೇಶದ ಅನ್ವಯ ಈ ಸಂಬಂಧ ಪುತ್ತೂರು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೆಲ್ಲಿಕಟ್ಟೆ ನಿವಾಸಿ ಕಸ್ತೂರಿ ಬಾಳಿಗಾ ಎಂಬವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ, ಎಪಿಎಂಸಿ ರಸ್ತೆಯಲ್ಲಿರುವ ಕೃಷಿ ಸಲಕರಣೆಗಳ ಮಾರಾಟ ಮಳಿಗೆಗೆ ಪರವಾನಗಿಯನ್ನು ಮಾರಾಟ ಮತ್ತು ಸೇವೆಗಾಗಿ ನೀಡಲಾಗಿದೆ. ಆದರೆ ಅವರು ಕೃಷಿ ಯಂತ್ರೋಪಕರಣಗಳ ರಿಪೇರಿ ಸಹ ಮಾಡುತ್ತಿದ್ದಾರೆ. ಇದರಿಂದ ಶಬ್ದ ಮಾಲಿನ್ಯ ಆಗುತ್ತಿದ್ದು ವಿದ್ಯಾರ್ಥಿಗಳು, ಸಾರ್ವಜನಿಕರು ಶಾಂತಿಯುತ ಜೀವನ ನಡೆಸಲು ಪರದಾಡುವಂತಾಗಿದೆ ಎಂದು ಹೇಳಿದ್ದಾರೆ.
ಅಸಂಜ್ಞೆಯ ಪ್ರಕರಣ ಇದಾದ ಕಾರಣ ನ್ಯಾಯಾಲಯದಿಂದ ಅನುಮತಿ ಪಡೆಯುವಂತೆ ಪೊಲೀಸರು ದೂರುದಾರರಿಗೆ ತಿಳಿಸಿದ್ದು, ಈಗ ನ್ಯಾಯಾಲಯದ ಆದೇಶದ ಅನ್ವಯ ಪ್ರಕರಣ ದಾಖಲಾಗಿದೆ.
























