ಪ್ರಧಾನಿಯನ್ನು ಹಾವಾಡಿಗನ ರೂಪದಲ್ಲಿ ತೋರಿಸಿದ ವ್ಯಂಗ್ಯಚಿತ್ರ
ಓಸ್ಲೊ: ನಾರ್ವೆಯ ಪತ್ರಿಕೆಯಲ್ಲಿ ಪಂಚರಾಷ್ಟ್ರ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರನ್ನು ಹಾವಾಡಿಗನಣತೆ ಬಿಂಬಿಸಿದ ಕಾರ್ಟೂನ್ ಪ್ರಕಟವಾಗಿದ್ದು, ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ನಾರ್ವೆ ದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮಗಳ ಪ್ರಶ್ನೆಗಳನ್ನು ತಪ್ಪಿಸುತ್ತಿದ್ದಾರೆ ಎಂದು ಅಲ್ಲಿನ ಪತ್ರಕರ್ತರೊಬ್ಬರು ಪ್ರಶ್ನಿಸಿದ ಬೆನ್ನಲ್ಲೇ, ನಾರ್ವೆಯ ಪ್ರಮುಖ ಪತ್ರಿಕೆಯೊಂದು ಪ್ರಧಾನಿ ಮೋದಿಯವರನ್ನು ‘ಹಾವಾಡಿಗ’ನಂತೆ ಬಿಂಬಿಸುವ ಜನಾಂಗೀಯ ನಿಂದನೆಯ ಕಾರ್ಟೂನ್ ಪ್ರಕಟಿಸಿದೆ. ಇದು ಪಾಶ್ಚಾತ್ಯರ ಹಳೇ ಮನಸ್ಥಿತಿ ಮತ್ತು ಪೂರ್ವಾಗ್ರಹವನ್ನು ಬಿಂಬಿಸುತ್ತದೆ ಎಂಬ ಆರೋಪ ಕೇಳಿಬಂದಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.

‘ಆಫ್ಟನ್ಪೋಸ್ಟನ್’ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಈ ಚಿತ್ರದಲ್ಲಿ, ಪ್ರಧಾನಿ ಮೋದಿ ಅವರು ಹಾವಿನ ಆಕಾರದಲ್ಲಿರುವ ಇಂಧನ ತುಂಬುವ ಪೈಪ್ ಒಂದನ್ನು ಹಿಡಿದುಕೊಂಡಿರುವುದನ್ನು ತೋರಿಸಲಾಗಿದೆ. ಇದನ್ನು “ಒಬ್ಬ ಚಾಣಾಕ್ಷ ಮತ್ತು ಕೊಂಚ ಕಿರಿಕಿರಿ ಉಂಟುಮಾಡುವ ವ್ಯಕ್ತಿ” ಎಂಬ ಶೀರ್ಷಿಕೆಯ ಲೇಖನದೊಂದಿಗೆ ಪ್ರಕಟಿಸಲಾಗಿದೆ.
ಜಂಟಿ ಸುದ್ದಿಗೋಷ್ಠಿಯ ವಿವಾದ
ನಾರ್ವೆ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಅವರೊಂದಿಗೆ ಜಂಟಿಯಾಗಿ ಕಾಣಿಸಿಕೊಂಡಾಗ, ಪ್ರಧಾನಿ ಮೋದಿ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಏಕೆ ಉತ್ತರಿಸುತ್ತಿಲ್ಲ ಎಂದು ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ ಬಹಿರಂಗವಾಗಿ ಪ್ರಶ್ನಿಸಿದ್ದರು. ಈ ಘಟನೆಯ ಬೆನ್ನಲ್ಲೇ ಈ ಕಾರ್ಟೂನ್ ವಿವಾದ ತಾರಕಕ್ಕೇರಿದೆ. ಪ್ರಧಾನಿ ಮೋದಿ ಈ ಪ್ರಶ್ನೆಗೆ ಪ್ರತಿಕ್ರಿಯಿಸದಿದ್ದರೂ, ನಂತರದ ದಿನಗಳಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರತಿನಿಧಿ ಹಾಗೂ ರಾಜತಾಂತ್ರಿಕ ಅಧಿಕಾರಿ ಸಿಬಿ ಜಾರ್ಜ್ ಅವರು ಇದಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕಾರ್ಟೂನ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಹಲವರು ಇದನ್ನು ಸ್ಪಷ್ಟ ಜನಾಂಗೀಯ ನಿಂದನೆ ಮತ್ತು ಭಾರತವನ್ನು “ಹಾವಾಡಿಗರ ನಾಡು” ಎಂದು ಬಿಂಬಿಸುವ ಹಳೆಯ ವಸಾಹತುಶಾಹಿ ಮನಸ್ಥಿತಿ ಎಂದು ಕರೆದಿದ್ದಾರೆ. ಈ ಚಿತ್ರಣವು ಜನಾಂಗೀಯ ದ್ವೇಷದಿಂದ ಕೂಡಿದೆ ಮತ್ತು ಭಾರತ ಹಾಗೂ ಅದರ ಚುನಾಯಿತ ನಾಯಕನಿಗೆ ಮಾಡಿದ ಅವಮಾನ ಎಂದು ಹಲವರು ಪತ್ರಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾರ್ವೆ ಭೇಟಿಯ ಸಂದರ್ಭದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ಮಾಧ್ಯಮಗಳ ಪ್ರಶ್ನೆಗಳನ್ನು ಏಕೆ ತೆಗೆದುಕೊಳ್ಳಲಿಲ್ಲ ಎಂದು ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ ಪ್ರಶ್ನಿಸಿದ ನಂತರ ಈ ವಿವಾದ ಭುಗಿಲೆದ್ದಿತು. ಅಲ್ಲಿ ಮುಕ್ತ ಪತ್ರಿಕಾಗೋಷ್ಠಿ ಏಕೆ ನಡೆಯಲಿಲ್ಲ ಎಂದು ಲಿಂಗ್ ಕೇಳಿದ್ದಲ್ಲದೆ, ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇಬ್ಬರೂ ನಾಯಕರು ಪ್ರತಿಕ್ರಿಯಿಸದೆ ತೆರಳಿದರೂ, ಲಿಂಗ್ ಈ ಸಂವಾದವನ್ನು ರೆಕಾರ್ಡ್ ಮಾಡಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಇದು ವೈರಲ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಈ ವಿವಾದಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸಿ.ಬಿ ಜಾರ್ಜ್ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ವಿಮರ್ಶಕರು ಭಾರತದ ವಿಸ್ತೀರ್ಣ ಮತ್ತು ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳದೆ, “ಅಜ್ಞಾನಿ ಎನ್ಜಿಒಗಳು” ಪ್ರಕಟಿಸುವ ಆಯ್ದ ವರದಿಗಳ ಆಧಾರದ ಮೇಲೆ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
“ಭಾರತದಲ್ಲಿ ಎಷ್ಟು ಸುದ್ದಿಗಳಿವೆ ಎಂದು ನಿಮಗೆ ತಿಳಿದಿದೆಯೇ? ಪ್ರತಿದಿನ ಸಂಜೆ ನಮ್ಮಲ್ಲಿ ಸಾಕಷ್ಟು ಬ್ರೇಕಿಂಗ್ ನ್ಯೂಸ್ಗಳು ಬರುತ್ತವೆ. ದೆಹಲಿಯೊಂದರಲ್ಲೇ ಇಂಗ್ಲಿಷ್, ಹಿಂದಿ ಮತ್ತು ವಿವಿಧ ಭಾಷೆಗಳ ಕನಿಷ್ಠ 200 ಟಿವಿ ಚಾನೆಲ್ಗಳಿವೆ. ಜನರಿಗೆ ಭಾರತದ ವ್ಯಾಪ್ತಿಯ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ. ಯಾರೋ ಅಜ್ಞಾನಿ ಎನ್ಜಿಒಗಳು ಪ್ರಕಟಿಸುವ ಒಂದೆರಡು ಸುದ್ದಿ ವರದಿಗಳನ್ನು ಓದಿ ಬಂದು ಪ್ರಶ್ನೆಗಳನ್ನು ಕೇಳುತ್ತಾರೆ,” ಎಂದು ಹಿರಿಯ ರಾಜತಾಂತ್ರಿಕ ಅಧಿಕಾರಿ ತರಾಟೆಗೆ ತೆಗೆದುಕೊಂಡರು.
























