ರೆಖ್ಯದಿಂದ ಕಾಣೆಯಾಗಿದ್ದ ನೆಲ್ಯಾಡಿ ಪಾಲೆತ್ತಾಡಿಯ ಯುವಕ
ಬೆಳ್ತಂಗಡಿ: ರೆಖ್ಯ ಗ್ರಾಮದ ದೇವಸ ಎಂಬಲ್ಲಿಗೆ ಸಂಬಂಧಿಕರ ಮನೆಗೆ ಆಗಮಿಸಿದ್ದ ನೆಲ್ಯಾಡಿ ಪಾಲೆತ್ತಾಡಿ ನಿವಾಸಿ ಅಶ್ವಿತ್ ಕುಮಾರ್ (37) ಎಂಬ ಯುವಕ ಮೇ 17 ರಂದು ಸಂಜೆ 4.15ರ ಬಳಿಕ ಕಣ್ಮರೆಯಾಗಿದ್ದರು. ಶೌರ್ಯ ವಿಪತ್ತು ನಿರ್ವಹಣಾ ತಂಡದವರು ಹಾಗೂ ಸ್ಥಳೀಯರು ನಡೆಸಿದ ನಿರಂತರ ಹುಡುಕಾಟದ ಬಳಿಕ ಶಿರಾಡಿ ಗ್ರಾಮದ ಕುಕ್ಕುಂಜ ಸಮೀಪದ ಉದನೆ ಹೊಳೆಯ ಸಮೀಪದಲ್ಲಿ ಮಂಗಳವಾರ ಮಧ್ಯಾಹ್ನ ವೇಳೆಗೆ ನಿತ್ರಾಣವಾಗಿ ಕುಳಿತಿದ್ದ ಸ್ಥಿತಿಯಲ್ಲಿ ಅಶ್ವಿತ್ ಕುಮಾರ್ ಅವರನ್ನು ಪತ್ತೆಹಚ್ಚಿದ್ದಾರೆ.
ಯುವಕ ನಾಪತ್ತೆಯಾದ ಬಳಿಕ ಸುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿ ಸಿಗದಿದ್ದಾಗ ಆತಂಕಗೊಂಡ ಕುಟುಂಬದವರು ಪತ್ತೆ ಕಾರ್ಯಕ್ಕೆ ಪೊಲೀಸರಿಗೆ ದೂರು ನೀಡಿದ್ದರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸಹಕಾರ ಕೇಳಿದ್ದರು. ಕೂಡಲೇ ಸ್ಪಂದಿಸಿದ ಶಿಶಿಲ ಅರಶಿನಮಕ್ಕಿ ಘಟಕದ ಸ್ವಯಂಸೇವಕರು ಹುಡುಕಾಟ ನಡೆಸಿದ್ದರು. ನಾಪತ್ತೆಯಾಗಿದ್ದ ಮಾರನೆಯ ದಿನ ಶೌರ್ಯ ತಂಡದ ಸ್ವಯಂಸೇವಕರು ಮತ್ತು ಸ್ಥಳೀಯರು ಸುತ್ತಲಿನ ಅರಣ್ಯ ಪ್ರದೇಶ, ನದಿ, ಗುಡ್ಡಗಾಡು, ಕೆರೆ ಮತ್ತಿತರ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದರು. ಬೆಳಗ್ಗೆಯಿಂದ ಸಂಜೆಯವರೆಗೆ ಹುಡುಕಿದರೂ ಪತ್ತೆಯಾಗಿರಲಿಲ್ಲ.
ಮಂಗಳವಾರ ಶೌರ್ಯ ತಂಡದ ಸದಸ್ಯರು, ಧರ್ಮಸ್ಥಳ ತುರ್ತು ಸ್ಪಂದನಾ ತಂಡದ ಸದಸ್ಯರು ಹಾಗೂ ಸ್ಥಳೀಯರು ಬೆಳಿಗ್ಗೆಯಿಂದಲೇ ಹುಡುಕುವ ಕಾರ್ಯಾಚರಣೆ ನಡೆಸಿದ್ದರು. ಶಿರಾಡಿ ಗ್ರಾಮದ ಕುಕ್ಕುಂಜ ಸಮೀಪದ ಉದನೆ ಹೊಳೆಯ ಸಮೀಪದಲ್ಲಿ ಮಂಗಳವಾರ ಮಧ್ಯಾಹ್ನ ಸುಮಾರು 2.15ರ ವೇಳೆಗೆ ನಿತ್ರಾಣವಾಗಿ ಕುಳಿತಿದ್ದ ಅಶ್ವಿತ್ ಕುಮಾರ್ ಅವರನ್ನು ಯುವಕರು ಪತ್ತೆಹಚ್ಚಿದ್ದಾರೆ. ಎರಡು ದಿನದ ಬಳಿಕ ದೊರೆತ ಅಶ್ವಿನ್ ಅವರು ನಿತ್ರಾಣಗೊಂಡಿದ್ದು ಅವರನ್ನು ಸ್ಥಳೀಯರು ಹಾಗೂ ಶೌರ್ಯ ತಂಡದ ಸದಸ್ಯರು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಾದ ಶ್ರೀ ಅನಿಲ್ ಕುಮಾರ್ ಎಸ್.ಎಸ್ ಸ್ವಯಂಸೇವಕರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸ್ವಯಂಸೇವಕರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ಅವಿನಾಶ್ ಭಿಡೆ ನೇತೃತ್ವದಲ್ಲಿ ಶಿಶಿಲ ಅರಶಿನಮಕ್ಕಿ ಘಟಕದ ಸ್ವಯಂಸೇವಕರು ಯಶಸ್ವಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. ಶ್ರೀ ಧರ್ಮಸ್ಥಳ ತುರ್ತು ಸ್ಪಂದನಾ ತಂಡದ ಘಟಕ ಪ್ರತಿನಿಧಿ ಸುಲೈಮಾನ್, ರವೀಂದ್ರ, ಘಟಕ ಸಂಯೋಜಕಿ ರಶ್ಮಿತಾ ಹಾಗೂ ಸದಸ್ಯರು ಭಾಗವಹಿಸಿದ್ದರು.
























