ಬೀದಿನಾಯಿ ಹಾವಳಿಯನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸಲು ಅಸಾಧ್ಯ ಎಂದ ನ್ಯಾಯಾಲಯ
ನವದೆಹಲಿ: ಸಾರ್ವಜನಿಕ ಸ್ಥಳಗಳು ಮತ್ತು ಜನದಟ್ಟಣೆ ಇರುವ ಪ್ರದೇಶಗಳಿಂದ ಬೀದಿನಾಯಿಗಳನ್ನು ತೆರವುಗೊಳಿಸುವಂತೆ 2025ರ ನವೆಂಬರ್‌ನಲ್ಲಿ ನೀಡಿದ್ದ ತನ್ನ ನಿರ್ದೇಶನವನ್ನು ಬದಲಿಸಲು ಅಥವಾ ಸಡಿಲಗೊಳಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಈ ಕುರಿತು ಸಲ್ಲಿಕೆಯಾಗಿದ್ದ ಹಲವಾರು ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಾಲಯ ಅಗತ್ಯವಿದ್ದಲ್ಲಿ ರೇಬಿಸ್ ಪೀಡಿತ ಅಥವಾ ಗುಣಪಡಿಸಲಾಗದ ಕಾಯಿಲೆ ಇರುವ ಬೀದಿನಾಯಿಗಳಿಗೆ ದಯಾಮರಣ ನೀಡಲು ರಾಜ್ಯ ಸರ್ಕಾರಗಳು ಹಿಂಜರಿಯಬಾರದು ಎಂದು ಆದೇಶಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು, ಸಾರ್ವಜನಿಕ ಸ್ಥಳಗಳಲ್ಲಿ ಜನರು ಎದುರಿಸುತ್ತಿರುವ ಕಠಿಣ ವಾಸ್ತವಗಳನ್ನು ನ್ಯಾಯಾಂಗವು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ನಾಗರಿಕರನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಒತ್ತಿಹೇಳಿದೆ.
ನ್ಯಾಯಾಲಯ ನೀಡಿದ ಪ್ರಮುಖ ಹೇಳಿಕೆಗಳು ಹೀಗಿವೆ:
*ಮಾನವ ಜೀವ ಮತ್ತು ಸುರಕ್ಷತೆಗೆ ಉಂಟಾಗುವ ಬೆದರಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು, ರೇಬಿಸ್ ಪೀಡಿತ, ಗುಣಪಡಿಸಲಾಗದ ಕಾಯಿಲೆ ಇರುವ ಅಥವಾ ಅತ್ಯಂತ ಅಪಾಯಕಾರಿ ಮತ್ತು ಆಕ್ರಮಣಕಾರಿ ನಾಯಿಗಳ ವಿಷಯದಲ್ಲಿ ದಯಾಮರಣ ಸೇರಿದಂತೆ ಕಾನೂನುಬದ್ಧವಾಗಿ ಅನುಮತಿಸಲಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಿ.
*ಚಿಕ್ಕ ಮಕ್ಕಳು ನಾಯಿಗಳ ದಾಳಿಗೆ ತುತ್ತಾಗುತ್ತಿದ್ದಾರೆ, ಹಿರಿಯ ನಾಗರಿಕರು ಮತ್ತು ವಿದೇಶಿ ಪ್ರವಾಸಿಗರ ಮೇಲೂ ದಾಳಿಗಳು ನಡೆಯುತ್ತಿವೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಡಾರ್ವಿನ್ ಅವರ ‘ಸಮರ್ಥರ ಬದುಕುಳಿಯುವಿಕೆ’ ಸಿದ್ಧಾಂತವು ಇಲ್ಲಿ ಅನ್ವಯವಾಗುತ್ತಿರುವಂತೆ ತೋರುತ್ತಿದೆ. ಸರ್ಕಾರದ ಕ್ರಮದ ಅನುಪಸ್ಥಿತಿಯಲ್ಲಿ ಮಕ್ಕಳು ಮತ್ತು ವೃದ್ಧರು ತಮ್ಮ ಉಳಿವಿಗಾಗಿ ಏಕಾಂಗಿಯಾಗಿ ಹೋರಾಡುವಂತಾಗಬಾರದು. ಜನರ ಜೀವ ಮತ್ತು ಸುರಕ್ಷತೆಯನ್ನು ಖಚಿತಪಡಿಸುವುದು ಸರ್ಕಾರದ ಕರ್ತವ್ಯವಾಗಿದೆ.
*ದೇಶಾದ್ಯಂತ ಬೀದಿ ನಾಯಿಗಳ ಕಡಿತದ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವುದನ್ನು ಅಂಕಿಅಂಶಗಳು ಪುಷ್ಟೀಕರಿಸುತ್ತವೆ. ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಕೇವಲ ಮೂರು ತಿಂಗಳಲ್ಲಿ 1,483 ಪ್ರಕರಣಗಳು ವರದಿಯಾಗಿದ್ದರೆ, ಉದಯಪುರದಲ್ಲಿ 2026ರಲ್ಲಿ 1,700ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ತಮಿಳುನಾಡಿನಲ್ಲಿ ಈ ವರ್ಷ 2,40,000 ಪ್ರಕರಣಗಳು ವರದಿಯಾಗಿದ್ದು, ಕೇವಲ ಮಾರ್ಚ್ ತಿಂಗಳೊಂದರಲ್ಲೇ 71,000 ಪ್ರಕರಣಗಳು ಮತ್ತು 34 ಸಾವುಗಳು ಸಂಭವಿಸಿವೆ. ಬೀದಿ ನಾಯಿಗಳ ಹಾವಳಿ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಸೂಕ್ಷ್ಮ ಪ್ರದೇಶಗಳಿಗೂ ವ್ಯಾಪಿಸಿದ್ದು, ರನ್‌ವೇಗಳಲ್ಲಿ ನಾಯಿಗಳು ಕಂಡುಬಂದಿರುವುದು ಸಾರ್ವಜನಿಕ ಸುರಕ್ಷತಾ ಕ್ರಮಗಳ ಗಂಭೀರ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ.
*ಸರ್ಕಾರ ಈ ವಿಚಾರದಲ್ಲಿ ಮೂಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ. ಮಕ್ಕಳು, ಪ್ರವಾಸಿಗರು ಮತ್ತು ವೃದ್ಧರು ನಾಯಿ ಕಡಿತಕ್ಕೆ ಬಲಿಯಾಗುತ್ತಿರುವ ಕಠಿಣ ವಾಸ್ತವದ ಬಗ್ಗೆ ನ್ಯಾಯಾಲಯವು ಅಜ್ಞಾತವಾಗಿರಲು ಸಾಧ್ಯವಿಲ್ಲ. ಮಕ್ಕಳು ಮತ್ತು ಹಿರಿಯ ನಾಗರಿಕರು ಕೇವಲ ತಮ್ಮ ದೈಹಿಕ ಶಕ್ತಿಯ ಬಲದಿಂದ ಬದುಕಬೇಕು ಎಂದು ನಮ್ಮ ಸಂವಿಧಾನವು ಆಶಿಸುವುದಿಲ್ಲ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.
























