ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ನಡೆದಿದ್ದ ಸಂಚು ಬಯಲು
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ವೇಳೆ ಆರ್ಟ್ ಆಫ್ ಲೀವಿಂಗ್ ಆಶ್ರಮದ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಪ್ರಕರಣದ ಅಸಲಿ ಕಾರಣ ಕೊನೆಗೂ ತನಿಖೆಯಲ್ಲಿ ಬಯಲಾಗಿದೆ. ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಈ ಪ್ರಕರಣವು ಯಾವುದೇ ಪ್ರಮುಖ ಉಗ್ರ ಸಂಘಟನೆಯ ಕೃತ್ಯವಲ್ಲ, ಬದಲಿಗೆ ಆಶ್ರಮದ ಮೇಲಿನ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಸಂಚು ಎಂಬ ಪ್ರಾಥಮಿಕ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಮೇ 10ರಂದು ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಶ್ರೀ ರವಿಶಂಕರ್ ಗುರೂಜಿ ಅವರ ಜನ್ಮದಿನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಆಶ್ರಮಕ್ಕೆ ಆಗಮಿಸಿದ್ದರು. ಪ್ರಧಾನಿ ಭೇಟಿಯ ಕೆಲವೇ ಗಂಟೆಗಳ ಮುನ್ನ ಆಶ್ರಮದ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿ ಪೊಲೀಸ್ ಇಲಾಖೆಯ ಭದ್ರತೆಯನ್ನೇ ಪ್ರಶ್ನಿಸುವಂತೆ ಮಾಡಿತ್ತು. ವಿಧಿವಿಜ್ಞಾನ ಪ್ರಯೋಗಾಲಯದ ಪರಿಶೀಲನೆ ವೇಳೆ ಒಂದು ವೇಳೆ ಈ ಜಿಲೆಟಿನ್ಗೆ ಬೆಂಕಿ ತಗುಲಿದ್ದರೂ ಇದು ಸ್ಫೋಟಗೊಳ್ಳುತ್ತಿರಲಿಲ್ಲ ಎಂದು ತಿಳಿದುಬಂದಿದೆ. ರವಿಶಂಕರ್ ಗುರೂಜಿ ಅವರ ಪ್ರಭಾವ ಕುಗ್ಗಿಸಲು ಮತ್ತು ಪ್ರಧಾನಿ ಆಶ್ರಮಕ್ಕೆ ಬರದಂತೆ ತಡೆಯಲು ಈ ಸಂಚು ರೂಪಿಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ಪೊಲೀಸರಿಗೆ ತಿಳಿದುಬಂದಿದೆ.
ಯಾವುದೇ ಸಿಸಿಟಿವಿ ಕ್ಯಾಮೆರಾಗಳಲ್ಲಿ ದೃಶ್ಯಾವಳಿಗಳು ದಾಖಲಾಗದ ಅತ್ಯಂತ ಸುರಕ್ಷಿತವಾದ ಜಾಗವನ್ನು ಆಯ್ದುಕೊಂಡು, ರಾತ್ರಿ 8 ಗಂಟೆಯಿಂದ ಬೆಳಗ್ಗೆ 7 ಗಂಟೆಯ ಅವಧಿಯಲ್ಲಿ ಈ ಜಿಲೆಟಿನ್ ಇರಿಸಲಾಗಿತ್ತು. ಪ್ರಸ್ತುತ ಬೆಂಗಳೂರು ದಕ್ಷಿಣ ವಲಯ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಮೊಬೈಲ್ ಟವರ್ ಲೋಕೇಶನ್ ಮತ್ತು ತಾಂತ್ರಿಕ ವಿಶ್ಲೇಷಣೆಯ ಮೂಲಕ ಆರೋಪಿಗಳ ಸುಳಿವು ಪತ್ತೆಹಚ್ಚಿದ್ದಾರೆ. ಪ್ರಧಾನಿ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
























