ಕ್ಸಿ ಜಿನ್ಪಿಂಗ್ ಅವರನ್ನು ಹಾಡಿ ಹೊಗಳಿದ ಟ್ರಂಪ್
ಬೀಜಿಂಗ್: ಚೀನಾಕ್ಕೆ ಭೇಟಿ ನೀಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಅಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಚೀನಾದ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕುತ್ತಿದ್ದ ಟ್ರಂಪ್ ಈಗ ಚೀನಾವನ್ನು ಹಾಡಿ ಹೊಗಳಿದ್ದಾರೆ. ಬೀಜಿಂಗ್ನ ಗ್ರೇಟ್ ಹಾಲ್ ಆಫ್ ಪೀಪಲ್ನಲ್ಲಿ ನಡೆದ ಐತಿಹಾಸಿಕ ಜಿ-2 (G2) ಶೃಂಗಸಭೆಯ ಆರಂಭಿಕ ಮಾತುಕತೆಯಲ್ಲಿ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ.
ಜಿನ್ಪಿಂಗ್ ಅವರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ನಿಮ್ಮೊಂದಿಗೆ ಇರುವುದು ಮತ್ತು ನಿಮ್ಮ ಸ್ನೇಹಿತನಾಗಿರುವುದು ನನಗೆ ಹೆಮ್ಮೆಯ ವಿಷಯ. ಚೀನಾ ಮತ್ತು ಅಮೆರಿಕ ನಡುವಿನ ಸಂಬಂಧ ಹಿಂದೆಂದಿಗಿಂತಲೂ ಉತ್ತಮವಾಗಲಿದೆ ಎಂದು ಆಶಾವಾದವನ್ನು ವ್ಯಕ್ತಪಡಿಸಿದರು.
ನಾನು ಜಿನ್ಪಿಂಗ್ ಅವರನ್ನು ಒಬ್ಬ ಶ್ರೇಷ್ಠ ನಾಯಕ ಎಂದು ಎಲ್ಲರ ಬಳಿ ಹೇಳುತ್ತೇನೆ. ಕೆಲವರಿಗೆ ನಾನು ಹೀಗೆ ಹೇಳುವುದು ಇಷ್ಟವಾಗುವುದಿಲ್ಲ, ಆದರೆ ಇದು ಸತ್ಯ. ನಾನು ಕೇವಲ ಸತ್ಯವನ್ನಷ್ಟೇ ಹೇಳುತ್ತೇನೆ ಎಂದರು. ತನಗೆ ನೀಡಲಾದ ಅದ್ದೂರಿ ರಾಜತಾಂತ್ರಿಕ ಸ್ವಾಗತವನ್ನು ನೋಡಿ, ಇದು ಕೆಲವೇ ಜನರಿಗೆ ಮಾತ್ರ ಸಿಗುವಂತಹ ಅತ್ಯುನ್ನತ ಗೌರವ ಎಂದು ಸಂತಸ ವ್ಯಕ್ತಪಡಿಸಿದರು.
ಚೀನಾ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುತ್ತಾ, ನೀವು ಮಾಡಿರುವ ಕೆಲಸಗಳ ಬಗ್ಗೆ ಮತ್ತು ಚೀನಾದ ಮೇಲೆ ನನಗೆ ಅಪಾರ ಗೌರವವಿದೆ ಎಂದು ಹರ್ಷಿಸಿದರು. ತನ್ನೊಂದಿಗೆ ಬಂದಿರುವ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್, ಆಪಲ್ ಸಿಇಒ ಟಿಮ್ ಕುಕ್ ಮತ್ತು ಎನ್ವಿಡಿಯಾ ಮುಖ್ಯಸ್ಥ ಜೆನ್ಸನ್ ಹುವಾಂಗ್ ಅವರಂತಹ ಬಿಲಿಯನೇರ್ ಉದ್ಯಮಿಗಳನ್ನು ಜಿನ್ಪಿಂಗ್ಗೆ ಪರಿಚಯಿಸುತ್ತಾ, ನಾನು ಜಗತ್ತಿನ ಅತ್ಯುತ್ತಮ ಉದ್ಯಮಿಗಳನ್ನು ಇಲ್ಲಿಗೆ ಕರೆತಂದಿದ್ದೇನೆ. ನಿಮಗೆ ಗೌರವ ಸಲ್ಲಿಸಲು ಕೇವಲ ಪ್ರಮುಖ ವ್ಯಕ್ತಿಗಳು ಮಾತ್ರ ಇಲ್ಲಿಗೆ ಬಂದಿದ್ದಾರೆ ಎಂದು ತಿಳಿಸಿದರು.
ಟ್ರಂಪ್ ಮೆಚ್ಚುಗೆಗೆ ಪ್ರತಿಯಾಗಿ ಮಾತನಾಡಿದ ಕ್ಸಿ ಜಿನ್ಪಿಂಗ್, ಚೀನಾ ಮತ್ತು ಅಮೆರಿಕ ದೇಶಗಳು ಪರಸ್ಪರ ಪ್ರತಿಸ್ಪರ್ಧಿಗಳಾಗುವ ಬದಲು ಪಾಲುದಾರರಾಗಬೇಕು ಎಂದು ಕರೆ ನೀಡಿದರು. ವಿಶ್ವವು ಇಂದು ಒಂದು ಹೊಸ ಜಾಗತಿಕ ಮನ್ವಂತರದಲ್ಲಿದೆ ಮತ್ತು ಇಡೀ ಜಗತ್ತು ಈ ಮಹತ್ವದ ಸಭೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಚೀನಾ-ಅಮೆರಿಕ ನಡುವಿನ ಸುದೃಢ ಮತ್ತು ಸ್ಥಿರವಾದ ಬಾಂಧವ್ಯವು ಇಡೀ ಜಗತ್ತಿಗೆ ಸಿಗುವ ಒಂದು ದೊಡ್ಡ ವರ ಎಂದು ಬಣ್ಣಿಸಿದರು.
ಉದಯೋನ್ಮುಖ ಶಕ್ತಿಯೊಂದು ಹಳೆಯ ಬಲಿಷ್ಠ ಶಕ್ತಿಯನ್ನು ಮೀರಿಸಲು ಹೊರಟಾಗ ಸಂಘರ್ಷ ಅನಿವಾರ್ಯ ಎಂಬ ಜಾಗತಿಕ ರಾಜತಾಂತ್ರಿಕ ಸಿದ್ಧಾಂತವನ್ನು ಎರಡೂ ದೇಶಗಳು ಮೀರಿ ನಿಲ್ಲಬೇಕಿದೆ. ನಾವು ಪರಸ್ಪರ ಯಶಸ್ಸನ್ನು ಸಾಧಿಸುತ್ತಾ, ಒಟ್ಟಿಗೆ ಅಭಿವೃದ್ಧಿ ಹೊಂದುವ ಹೊಸ ಮಾದರಿಯ ಬಲಿಷ್ಠ ರಾಷ್ಟ್ರಗಳ ಸಂಬಂಧವನ್ನು ಜಗತ್ತಿಗೆ ಪರಿಚಯಿಸಬೇಕು ಎಂದು ಕರೆ ನೀಡಿದರು.
























