ಶಿಕ್ಷಣವನ್ನು ಇಸ್ಲಾಮೀಕರಣ ಮಾಡುವ ವ್ಯವಸ್ಥಿತ ಷಡ್ಯಂತ್ರ ಎಂದ ಯಶ್ಪಾಲ್ ಸುವರ್ಣ
ಉಡುಪಿ: ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ತುಷ್ಟೀಕರಣಕ್ಕಾಗಿ ಸಂವಿಧಾನ, ನ್ಯಾಯಾಲಯ ಎಲ್ಲವನ್ನೂ ಬಲಿಕೊಡಲು ಕಾಂಗ್ರೆಸ್ ತಯಾರಿದೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾರ್ಕಳದ ಶಾಸಕ ಹಾಗೂ ಮಾಜಿ ಸಚಿವ ವಿ.ಸುನೀಲ್ ಕುಮಾರ್, ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ತನ್ನ ಮುಸ್ಲಿಂ ಓಲೈಕೆ ನೀತಿಯನ್ನು ಬಹಿರಂಗವಾಗಿ ಪ್ರಕಟಗೊಳಿಸಿದೆ. 2022ರಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೆ ತಂದಿತ್ತು. ಈ ವಿಚಾರ ಇನ್ನೂ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇರುವ ಸಂದರ್ಭದಲ್ಲೇ ಸರ್ಕಾರ ಆದೇಶವನ್ನು ವಾಪಾಸ್ ಪಡೆದು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶ ಕಲ್ಪಿಸಿರುವುದು ಸಂವಿಧಾನ ವಿರೋಧಿಯಷ್ಟೇ ಅಲ್ಲ, ನ್ಯಾಯಾಂಗ ನಿಂದನೆಯೂ ಆಗಿದೆ ಎಂದಿದ್ದಾರೆ.
ದಾವಣಗೆರೆ ಉಪ ಚುನಾವಣೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ಗೆ ಕೊಟ್ಟ ಕಪಾಳಮೋಕ್ಷದ ನೋವನ್ನು ಮರೆಯುವುದಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಈಗ ಒಂದಾದ ಮೇಲೋಂದರಂತೆ ಮುಸ್ಲಿಂ ತುಷ್ಟೀಕರಣ ನಡೆಸುತ್ತಿದೆ. ಕಳೆದ ಬಾರಿ ಕ್ಯಾಬಿನೆಟ್ ಸಭೆಯಲ್ಲಿ ಮುಸ್ಲಿಂ ಕಾಲೋನಿಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಕೊಡಲಾಗಿತ್ತು. ಅದರ ಬೆನ್ನಲ್ಲೇ ಈಗ ಹಿಜಾಬ್ಗೆ ಅವಕಾಶ ನೀಡಲಾಗಿದೆ. ತನ್ನ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವುದಕ್ಕಾಗಿ ದೇಶದ ಸಮಗ್ರತೆ ಹಾಗೂ ಸಂವಿಧಾನವನ್ನು ಒತ್ತೆ ಇಡುವುದಕ್ಕೆ ಹೇಸದ ಕಾಂಗ್ರೆಸಿರಿಗೆ ಈಗ ಮತ್ತೆ ಹಿಜಾಬ್ ಧ್ಯಾನ ಶುರುವಾಗಿದೆ. ಈ ಆದೇಶ ಎಷ್ಟು ಗೊಂದಲ ಗೂಡಾಗಿದೆಯೆಂದರೆ ಸಮವಸ್ತ್ರದ ಮೂಲ ಉದ್ದೇಶವನ್ನು ಬದಲಾಯಿಸಬಾರದು ಅಥವಾ ಹಾಳು ಮಾಡಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಹಿಜಾಬ್ ಧರಿಸಿದರೆ ಸಮವಸ್ತ್ರದ ಮೂಲ ಕಲ್ಪನೆಯೇ ವ್ಯತ್ಯಾಸವಾಗುತ್ತದೆ ಎಂದಿದ್ದಾರೆ.
ಈ ಸರ್ಕಾರಕ್ಕೊಂದು ಶೈಕ್ಷಣಿಕ ಧೋರಣೆಯೇ ಇಲ್ಲ. ಸಾಮಾಜಿಕ ಸಾಮರಸ್ಯವನ್ನು ಕದಡುವ ವಿಷ ಕಕ್ಕುವುದೇ ಸಿದ್ದರಾಮಯ್ಯ ಸರ್ಕಾರದ ಕಸುಬಾಗಿ ಬಿಟ್ಟಿದೆ. ಇಂಥ ಓಲೈಕೆ ರಾಜಕಾರಣದಿಂದ ದೇಶಾದ್ಯಂತ “ಕಸ”ವಾಗಿರುವ ಕಾಂಗ್ರೆಸ್ ಸದ್ಯದಲ್ಲಿ ರಾಜ್ಯದಲ್ಲೂ ಮೂಲೆಗೆ ಸೇರುವ ದಿನಗಣನೆ ಈ ಆದೇಶದೊಂದಿಗೆ ಪ್ರಾರಂಭವಾಗಿದೆ. ಅತಿಯಾದ ಓಲೈಕೆ ಮಾಡಿದಕ್ಕಾಗಿ ಪಶ್ಚಿಮ ಬಂಗಾಲ ಹಾಗೂ ಇತರ ರಾಜ್ಯಗಳಲ್ಲಿ ಕತೆ ಏನಾಗಿದೆ ಎಂಬುದನ್ನು ಕಾಂಗ್ರೆಸ್ ಮರೆಯದಿರಲಿ ಎಂದಿದ್ದಾರೆ.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಪ್ರತಿಕ್ರಿಯಿಸಿ ಶಿಕ್ಷಣವನ್ನು ಇಸ್ಲಾಮೀಕರಣ ಮಾಡುವ ವ್ಯವಸ್ಥಿತ ಷಡ್ಯಂತ್ರ ಕಾಂಗ್ರೆಸ್ಸಿನಿಂದ ನಡೆಯುತ್ತಿದೆ ಎಂದಿದ್ದಾರೆ. ಹಿಜಾಬ್ ವಿವಾದ ಪ್ರಾರಂಭವಾದದ್ದು ಉಡುಪಿಯಲ್ಲಿ. ಬಳಿಕ ಬಿಜೆಪಿ ಸರ್ಕಾರ ಶೀಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಇರಬೇಕೆಂಬ ಆಶಯದಿಂದ 2022ರಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಿ ಆದೇಶ ಹೊರಡಿಸಿತ್ತು. ಅನಂತರ ಎಲ್ಲ ಗೊಂದಲಗಳು ನಿವಾರಣೆಯಾಗಿದ್ದವು. ವಸ್ತ್ರ ಸಂಹಿತೆಗೆ ಕೆಲವು ಸ್ಥಾಪಿತ ಹಿತಾಸಕ್ತಿಗಳನ್ನು ಹೊರತುಪಡಿಸಿದರೆ ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಇದೀಗ ಸಿದ್ದರಾಮಯ್ಯನವರು ಯಾರ ಒತ್ತಾಯ ಅಥವಾ ಬೇಡಿಕೆಯೂ ಇಲ್ಲದಿರುವಾಗ ಏಕಾಏಕಿ ಹಿಜಾಬ್ಗೆ ಅನುಮತಿ ನೀಡುವ ನಿರ್ಧಾರದ ಹಿಂದಿನ ಉದ್ದೇಶ ಯಾರಿಗಾದರೂ ಅರ್ಥವಾಗುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು, ಶಾಂತಿ ಇರಬಾರದು ಎನ್ನುವುದೇ ಈ ಸರ್ಕಾರದ ಉದ್ದೇಶವಾಗಿದೆ ಎಂದಿದ್ದಾರೆ.
ಹಿಂದೂ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿವೆ. ಈ ಕುರಿತು ಹಿಂದೂ ಮುಖಂಡ ಸುನೀಲ್ ಕೆ.ಆರ್ ಮಾತನಾಡಿ, ಸರ್ಕಾರ ಇಸ್ಲಾಮಿಕರಣಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದೆ. ರಾಜ್ಯ ಸರ್ಕಾರಕ್ಕೆ ಮುಸ್ಲಿಮರ ಓಲೈಕೆಯೆ ಬಹು ಮುಖ್ಯವಾದಂತಿದೆ. ಮೂಲಭೂತವಾದಿ ಸಂಘಟನೆಗಳ ಜೊತೆಗೆ ರಾಜ್ಯ ಸರ್ಕಾರ ನಿಂತಿದೆ ಎಂದು ಕಿಡಿಕಾರಿದ್ದಾರೆ.
ಹಿಜಾಬ್ ವಿಚಾರ ಮತ್ತೆ ಮುನ್ನೆಲೆಗೆ ತರುವ ಮೂಲಕ ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಈ ನಿರ್ಧಾರದ ಹಿಂದೆ ಬಹಳ ದೊಡ್ಡ ಷಡ್ಯಂತ್ರವಿದೆ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
























