ಈ ತಿಂಗಳಿಂದ ಜೀವನಾಂಶ ಪಾವತಿಯಾಗಬೇಕಿತ್ತು ಎಂದ ವಿಶ್ವಕರ್ಮ ಮಹಾಸಭಾ
ಪುತ್ತೂರು: ಕಾಲೇಜು ಸ್ನೇಹಿತೆಗೆ ಮಗು ಕರುಣಿಸಿದ ಪ್ರಕರಣದಲ್ಲಿ ಆರೋಪಿ ಹೈಕೋರ್ಟ್ ನೀಡಿದ ಆದೇಶದಂತೆ 75 ಸಾವಿರ ರೂ. ಜೀವನಾಂಶ ನೀಡಿಲ್ಲ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಆರೋಪಿಸಿದೆ.
ಆರೋಪಿ ಕೃಷ್ಣ ಜೆ.ರಾವ್ಗೆ ಹೈಕೋರ್ಟ್ ಅಂತಿಮ ತೀರ್ಪು ಹೊರಬೀಳುವ ತನಕ ಸಂತ್ರಸ್ತ ಯುವತಿಗೆ ಪ್ರತಿ ತಿಂಗಳು 75 ಸಾವಿರ ರೂ ಜೀವನಾಂಶ ನೀಡಬೇಕೆಂದು ಆದೇಶಿಸಿತ್ತು. ಮೇ 1ರಂದು ಈ ತಿಂಗಳ ಜೀವನಾಂಶ ನೀಡಬೇಕಿತ್ತು. ಆದರೆ ಇನ್ನೂ ಯುವತಿಗೆ ಹಣ ನೀಡಿಲ್ಲ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಬೆಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಪುತ್ತೂರಿನ ಪ್ರಭಾವಿ ವ್ಯಕ್ತಿಯ ಪುತ್ರ ಕೃಷ್ಣ ಜೆ.ರಾವ್ ವಿಶ್ವಕರ್ಮ ಸಮುದಾಯದ ಯುವತಿಯನ್ನು ನಂಬಿಸಿ ಮಗು ಕರುಣಿಸಿದ್ದಾರೆ. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದಾಗ ಅಂತಿಮ ತೀರ್ಪು ಪ್ರಕಟವಾಗುವ ತನಕ ಮಾಸಿಕ 75 ಸಾವಿರ ರೂ. ಜೀವನಾಂಶ ನೀಡಲು ತೀರ್ಪು ಆಗಿದೆ. ಆದರೆ ಹಣ ಪಾವತಿಸದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದ್ದಾರೆ.
ಕಳೆದ ಏ.24ರಂದು ಹೈಕೋರ್ಟ್ ಷರತ್ತಿಗೊಳಪಟ್ಟು ತಡೆಯಾಜ್ಞೆ ನೀಡುವಾಗ ಜೀವನಾಂಶದ ಕುರಿತು ಸ್ಪಷ್ಟವಾಗಿ ಉಲ್ಲೇಖಗಳನ್ನು ಮಾಡಿದೆ. ಆರೋಪಿ ಈ ಆದೇಶವನ್ನು ಪಾಲಿಸದೆ ನ್ಯಾಯಾಲಯವನ್ನೇ ಧಿಕ್ಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
























